ದಾವಣಗೆರೆ: ಮಹಾನಗರ ವ್ಯಾಪ್ತಿಯಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡುವವರೇ ಹುಷಾರ್. ಯಾಕೆಂದರೆ ಮೂಲೆ ಮೂಲೆಯಲ್ಲಿಯೂ ಕಣ್ಗಾವಲು. ಸ್ಮಾರ್ಟ್ ಸಿಟಿ ವತಿಯಿಂದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 109 ಕಡೆಗಳಲ್ಲಿ 254 ಸಿಸಿ ಕ್ಯಾಮೆರಾ ಇರಲಿದೆ.
ಸ್ಮಾರ್ಟ್ ಸಿಟಿಯ ಮಾಹಿತಿ ಸಂವಹನ ತಂತ್ರಜ್ಞಾನ ವಿಭಾಗದ ವತಿಯಿಂದ ಅಳವಡಿಸುವ ಕಾರ್ಯ ನಡೆದಿದ್ದು, ಈ ಪೈಕಿ ಎರಡು ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಇರಲಿದೆ. ಒಂದು ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಮಾನಿಟರ್ ಆಗುತ್ತಿದ್ದರೆ, ಮತ್ತೊಂದು ಸೆಂಟರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆಯಲಿದೆ.
ಪಾಲಿಕೆ, ಕೆಎಸ್‌ಆರ್‌ಟಿಸಿ, ಆಂಬುಲೆನ್ಸ್, ಫೈರ್ ಸೇರಿದಂತೆ ಬೇರೆ ಬೇರೆ ವಿಭಾಗಗಳ ಕುರಿತ ಮಾನಿಟರಿ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಆಗಲಿದೆ. ಈ ಮೂಲಕ ಸಂಚಾರಿ ನಿಯಮ ಉಲ್ಲಂಘನೆ ಮಾಡುವವರನ್ನು ಪತ್ತೆ ಹಚ್ಚುವ ಕಾರ್ಯ ಸುಲಭವಾಗಿ ಆಗಲಿದೆ.
ಆಟೋಮ್ಯಾಟಿಕ್ ನಂಬರ್ ಪ್ಲೇಟ್ ಪತ್ತೆ ಹಚ್ಚುವ ಕ್ಯಾಮೆರಾ ಅಳವಡಿಸಲಾಗಿದೆ. ಇದಕ್ಕೆ ಎಎನ್‌ಪಿಆರ್ ಕ್ಯಾಮೆರಾ ಎನ್ನಲಾಗುತ್ತದೆ. ನಗರಕ್ಕೆ ಬರುವ ಹಾಗೂ ಹೊರ ಹೋಗುವ ವಾಹನಗಳ ದೃಶ್ಯಾವಳಿ ಸೆರೆಯಾಗಲಿದೆ. ಕಳ್ಳತನ ಮಾಡಿದ ವಾಹನಗಳ ನಂಬರ್ ಪ್ಲೇಟ್ ಬದಲಾಯಿಸಿ ಹೋದರೂ ಗೊತ್ತಾಗಲಿದೆ. ಯಾವುದೇ ವಾಹನಗಳು ನಗರದೊಳಗೆ ಬಂದರೂ, ಹೊರಗಡೆ ಹೋದರೂ ಗೊತ್ತಾಗುತ್ತದೆ. ಕಳ್ಳತನ ಮಾಡಿದ ವಾಹನಗಳ ಪತ್ತೆ ಹಚ್ಚುವುದು ಸುಲಭ ಆಗುತ್ತದೆ.
ಸಿಗ್ನಲ್ ಜಂಪ್, ವೇಗ ಚಾಲನೆ ಪತ್ತೆ: ಸಿಗ್ನಲ್ ನಿಯಮ ಉಲ್ಲಂಘನೆ ಕಂಡು ಹಿಡಿಯುವುದಕ್ಕೂ ಕ್ಯಾಮೆರಾ ಅಳವಡಿಸಲಾಗಿದೆ. ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಿಗ್ನಲ್ ಜಂಪ್ ಮಾಡುವುದು ಸಹ ಪತ್ತೆ ಹಚ್ಚಬಹುದು. ವೇಗವಾಗಿ ವಾಹನ ಚಲಾಯಿಸುವುದನ್ನು ಪತ್ತೆ ಹಚ್ಚಲು ಆರು ಸ್ಥಳಗಳಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ. ಬೈಕ್ 40 ಕಿಲೋಮೀಟರ್, ಕಾರು 60 ಕಿಲೋಮೀಟರ್ ವೇಗ ಇರಬೇಕು. ಹೆಚ್ಚಾದರೆ ಕ್ಯಾಮೆರಾದ ಮೂಲಕ ಪತ್ತೆ ಹಚ್ಚಿ ದಂಡ ವಿಧಿಸಬಹುದಾಗಿದೆ.
ಟ್ರಾಫಿಕ್ ಸಮಸ್ಯೆ ಕುರಿತಂತೆ 23 ಕಡೆಗಳಲ್ಲಿ ಟ್ರಾಫಿಕ್ ನಿಯಂತ್ರಣ ಸಿಸ್ಟಂ ಅಂದರೆ ಟ್ರಾಫಿಕ್ ಜಂಕ್ಷನ್ ಅಳವಡಿಕೆ ಮಾಡಲಾಗಿದೆ. ಅದೇ ರೀತಿಯಲ್ಲಿ ಬೇರೆ ಕಡೆಗಳಲ್ಲಿ ವಾಹನ ದಟ್ಟಣೆ ಹೆಚ್ಚಿದ್ದರೆ ಸಮೀಪದಲ್ಲಿನ ಸಿಗ್ನಲ್‌ನಲ್ಲಿ ಮಾಹಿತಿ ಸಿಗಲಿದೆ.