ಚಿಕ್ಕಮಗಳೂರು: ಕಾಡಾನೆ ದಾಳಿಗೆ ಸಿಲುಕಿ ಮಹಿಳೆ ಮೃತಪಟ್ಟಿರುವುದರಿಂದ ಆಕ್ರೋಶಗೊಂಡ ಜನರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಶಾಸಕ ಎಂ.ಪಿ. ಕುಮಾರಸ್ವಾಮಿ ಆಗಮೀಸಿದ್ದು ಜನರು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ಬಟ್ಟೆ ಹರಿದು ಕಿಡಿಕಾರಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಹುಲ್ಲೇಮನೆ ಕುಂದೂರು ಗ್ರಾಮದಲ್ಲಿ ನಡೆದಿದೆ.
ಹುಲ್ಲೇಮನೆ ಕುಂದೂರು ಗ್ರಾಮದಲ್ಲಿ ಭಾನುವಾರ ರೈತ ಮಹಿಳೆ ಶೋಭಾ (45) ಎಂಬುವರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದರು. ಜಿಲ್ಲೆಯಲ್ಲಿ ಕಾಡಾನೆ ದಾಳಿ ಹೆಚ್ಚಾಗುತ್ತಿದ್ದು, ಈಗಾಗಲೇ ಅನೇಕರು ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ. ಭಾನುವಾರವೂ ಸಹ ಇಂತಹ ಘಟನೆ ಮರು ಕಳಿಸಿದೆ. ಇದರಿಂದ ಜನರು ಆಕ್ರೋಶಗೊಂಡಿದ್ದಾರೆ.
ಕಾಡಾನೆ ದಾಳಿಯಿಂದ ಮಹಿಳೆ ಸಾವು ಖಂಡಿಸಿ ಹುಲ್ಲೇಮನೆ ಕುಂದೂರು ಮತ್ತು ಸುತ್ತಮುತ್ತಲ ಗ್ರಾಮದ ಸಾವಿರಾರು ಜನರು ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆಯ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನೆ ತೀವ್ರಗೊಂಡಿದ್ದು, ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಬೇಕು. ಅಲ್ಲಿಯವರೆಗೆ ಕಾಡಾನೆ ದಾಳಿಯಿಂದ ಮೃತರಾದ ಮಹಿಳೆ ಶವವನ್ನು ಮೇಲೆತ್ತಲು ಬಿಡುವುದಿಲ್ಲ ಎಂದು ಸಾರ್ವಜನಿಕರು ಪಟ್ಟು ಹಿಡಿದಿದ್ದರು.
ಬಳಿಕ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಈ ಭಾಗದಲ್ಲಿ ಜನರ ಪ್ರಾಣಹಾನಿಗೆ ಕಾರಣವಾಗುತ್ತಿರುವ ಕಾಡಾನೆಯನ್ನು ಹಿಡಿಯುವುದಾಗಿ ಮೌಖಿಕ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಕೈಬಿಟ್ಟ ಜನರು ಶವವವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲು ಅವಕಾಶ ನೀಡಿದರು.
ಈ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕಾಗಮಿಸಿದ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿಯವರ ಮೇಲೆ ಉದ್ರಿಕ್ತ ಜನರು ಮುಗಿಬಿದ್ದರು. ಸತತ ಕಾಡಾನೆ ದಾಳಿಯಿಂದ ಸಂತ್ರಸ್ತರಾಗಿದ್ದ ನೂರಾರು ಪುರುಷರು ಮತ್ತು ಮಹಿಳೆಯರು ಶಾಸಕರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ಶಾಸಕರ ಮೇಲೆ ಹಲ್ಲೆಗೆ ಮುಂದಾದರು. ಈ ವೇಳೆ ಶಾಸಕರಿಗೆ ಪೊಲೀಸರು ರಕ್ಷಣೆ ನೀಡಲು ಹರಸಾಹಸಪಟ್ಟರು. ಪೊಲೀಸ್ ಜೀಪಿನಲ್ಲಿ ಶಾಸಕರನ್ನು ಕರೆದೊಯ್ಯಲು ಪ್ರಯತ್ನಿಸಿದಾಗ ಜನರು ಪೊಲೀಸ್ ಜೀಪಿಗೆ ಮುತ್ತಿಗೆ ಹಾಕಿದರು.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರ ಮತ್ತು ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆಯಿತು. ಕೋಪಗೊಂಡಿದ್ದ ಜನರು ಶಾಸಕ ಕುಮಾರಸ್ವಾಮಿ ಬಟ್ಟೆ ಹರಿದು ಆಕ್ರೋಶ ವ್ಯಕ್ತಪಡಿಸಿದರು.
ಘಟನೆಯ ಬಗ್ಗೆ ಹರಿದ ಬಟ್ಟೆಯಲ್ಲೇ ಶಾಸಕ ಕುಮಾರಸ್ವಾಮಿ ತಮ್ಮ ಪರಿಸ್ಥಿತಿ ವಿವರಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವೇಳೆ ಬೇಕು ಅಂತಾ ಗುಂಪುಗೂಡಿ ಹಲ್ಲೆ ಮಾಡಿದ್ದಾರೆ. ನಾನು ಅಲ್ಲೇ ಇರುತ್ತಿದ್ದೆ, ನನ್ನನ್ನು ಪೊಲೀಸರು ಮಿಸ್ಗೈಡ್ ಮಾಡಿ ಹೊರಗೆ ಕಳಿಸಿದ್ದರು ಎಂದಿರುವ ಶಾಸಕರು, ಇದು ಪೊಲೀಸರ ವೈಫಲ್ಯ ಎಂದು ಹೇಳಿದ್ದಾರೆ.
ಭಾನುವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಹುಲ್ಲೇಮನೆ ಗ್ರಾಮದ ಶೋಭಾ (45), ಪತಿ ಸತೀಶ್ ಗೌಡ ಅವರೊಂದಿಗೆ ತೋಟದಲ್ಲಿ ಹುಲ್ಲು ಕೊಯ್ಯುತ್ತಿದ್ದರು. ಜೊತೆಗೆ ವಿಜಯ ಎನ್ನುವವರು ಕೂಡ ಇದ್ದರು. ಈ ವೇಳೆ ಏಕಾಏಕಿ ಪ್ರತ್ಯಕ್ಷವಾದ ಕಾಡಾನೆ ದಾಳಿ ಮಾಡಲು ಮುಂದಾಗಿದೆ.
ವಿಜಯ ಅವರ ಸಾಕು ನಾಯಿ ಅಲ್ಲಿಯೇ ಇದಿದ್ದರಿಂದ ಕಾಡಾನೆ ನಾಯಿಗೆ ಬೆದರಿದೆ. ಆ ಸಮಯದಲ್ಲಿ ವಿಜಯ ಹಾಗೂ ಸತೀಶ್ ಗೌಡ ತಪ್ಪಿಸಿಕೊಂಡಿದ್ದಾರೆ. ಆದರೆ ಶೋಭಾ ತೋಟದಿಂದ ರಸ್ತೆಗೆ ಬರುತ್ತಿದ್ದಾ ದಾಳಿ ನಡೆಸಿ, ಸೊಂಡಿಲಿನಿಂದ ಎತ್ತಿ ಬಿಸಾಡಿ ತುಳಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.