ಬೆಂಗಳೂರು: ಕೋವಿಡ್-19 ಅವಧಿಯಲ್ಲಿ ತಾತ್ಕಾಲಕವಾಗಿ ತಡೆಹಿಡಿದಿದ್ದ ಎಲ್ಲಾ ಭತ್ಯೆಗಳನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮತ್ತೆ ಜಾರಿ ಮಾಡಿದ್ದು ಆ ಎಲ್ಲ ಭತ್ಯೆಗಳನ್ನು ನವೆಂಬರ್ ವೇತನದಿಂದಲೇ ಕೊಡಲಾಗುವುದು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ (Managing Director) ಸತ್ಯವತಿ ತಿಳಿಸಿದ್ದಾರೆ.
ಈ ಸಂಬಂಧ ಇದೇ ನ.22ರಂದು (ನಿನ್ನೆ ಮಂಗಳವಾರ) ಎಲ್ಲ ಅಧಿಕಾರಿಗಳಿಗೂ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೋವಿಡ್-19 ಅವಧಿಯಲ್ಲಿ ತಾತ್ಕಾಲಕವಾಗಿ ತಡೆಹಿಡಿದಿದ್ದ ವಾಷಿಂಗ್ ಭತ್ಯ, ಎಈಪಾಸ್ಟ್ ಭತ್ಯೆ, ನಗದು ಭತ್ಯೆ, ಘಟಕ ಭತ್ಯೆ, ಬಾಟಾ, ರಾತ್ರಿ ತಂಗುವ ಪಾಳಿ ಭತ್ಯೆ, ರಾತ್ರಿ ಸೇವಾ ಭತ್ಯೆ, ವಿಶೇಷ ಭತ್ಯೆ, ಚಿನ್ನದ ಪದಕ ಭತ್ಯೆ, ಬೆಳ್ಳಿ ಪದಕ ಭತ್ಯೆ, ಪ್ರಭಾರ ಭತ್ಯೆ.
ಕುಟುಂಬ ನಿಯಂತ್ರಣ ಭತ್ಯೆ, ವೋಲ್ವೋ ವಿಶೇಷ ಭತ್ಯೆ, ಶಿಶು ಪೋಷಣಾ ಭತ್ಯೆ, ಅಂಗವಿಕಲ ಶಿಶು ಪೋಷಣಾ ಭತ್ಯೆ, ಹೋಮ್ ಅಡರ್ಲಿ ಭತ್ಯೆ, ದಿನ ಪತ್ರಿಕೆ ಭತ್ಯೆ, ಹಾರ್ಡ್‌ಶಿಪ್ ಭತ್ಯೆ ಮತ್ತು ಹಿರಿಯ/ ಘಟಕ ವ್ಯವಸ್ಥಾಪಕರ ವಾಹನ ಭತ್ಯೆಗಳನ್ನು ಕೋವಿಡ್ ಪೂರ್ವದಂತೆ ಕೊಡಲಾಗುವುದು ಎಂದು ವಿವರಿಸಿದ್ದಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಕೋವಿಡ್-19 ಪೂರ್ವದಲ್ಲಿ ಸಂಸ್ಥೆಯ ಅಧಿಕಾರಿ/ನೌಕರರಿಗೆ ನೀಡಲಾಗುತ್ತಿದ್ದ ಈ ಎಲ್ಲ ರೀತಿಯ ಭತ್ಯೆಗಳನ್ನು ಸರ್ಕಾರದ ನಿರ್ದೇಶನದಂತೆ ತಾತ್ಕಾಲಕವಾಗಿ ತಡೆಹಿಡಿಯಲಾಗಿತ್ತು.
ಆದರೆ, ಈಗ ಮತ್ತೆ ಸಂಸ್ಥೆಯ ಅಧಿಕಾರಿ/ ಸಿಬ್ಬಂದಿಗಳಗೆ ಕೋವಿಡ್ ಪೂರ್ವದಲ್ಲಿ ನೀಡಲಾಗುತ್ತಿದ್ದ ಚಾಲ್ತಿಯಲ್ಲಿರುವ ಭತ್ಯೆಗಳನ್ನು ನವೆಂಬರ್- 2022 ರ ವೇತನದೊಂದಿಗೆ ಪುನಃ ಜಾರಿಗೆ ತರಲಾಗಿದೆ.
ಹೀಗಾಗಿ ಸಂಬಂಧಪಟ್ಟವರು ಅದರಂತೆ ಸೂಕ್ತ ಕ್ರಮ ಕೈಗೊಂಡು ವೇತನದಲ್ಲಿ ಜಾರಿಗೊಳಿಸಲು ಆದೇಶಿಸಲಾಗಿದೆ ಹಾಗೂ ಸುತ್ತೋಲೆ ತಲುಪಿದ್ದಕ್ಕೆ ಸ್ವೀಕೃತಿಯನ್ನು ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಬಿಎಂಟಿಸಿ ಎಂಡಿ ಸತ್ಯವತಿ ಸೂಚನೆ ನೀಡಿದ್ದಾರೆ.