ರಾಮನಗರ: ಕರ್ತವ್ಯದಲ್ಲಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕನೋರ್ವ ಹೃದಯಾಘಾತದಿಂದ ನಿಧನ ಹೊಂದಿರುವ ಘಟನೆ ಚನ್ನಪಟ್ಟಣ ತಾಲೂಕಿನ ಕನ್ನಮಂಗಲ ಗ್ರಾಮದಲ್ಲಿ ಡಿ.4ರ ಮಧ್ಯರಾತ್ರಿ ನಡೆದಿದೆ.
ರಾಮನಗರ ಬಸ್ ಘಟಕದ ಚಾಲಕ ಕೆ.ಎನ್. ಆನಂದ್ (47) ಮೃತರು. ಡಿ.4 ರ ರಾತ್ರಿ ರಾಮನಗರದಿಂದ ಹೊರಟು ಕನ್ನಮಂಗಲ ಗ್ರಾಮದಲ್ಲಿ ರಾತ್ರಿ ತಂಗಿದ್ದರು. ರಾತ್ರಿ ಊಟ ಮಾಡಿ ನಿದ್ದೆಗೆ ಜಾರಿದ ಆನಂದ್ ಅವರು ಬೆಳಗ್ಗೆ ಶವವಾಗಿದ್ದರು.
ಇಂದು (ಡಿ.5) ಮುಂಜಾನೆ 5 ಗಂಟೆ ಸಮಯದಲ್ಲಿ ಕರ್ತವ್ಯಕ್ಕೆ ಹೊರಡಲು ನಿರ್ವಾಹಕ ಕೃಷ್ಣಪ್ಪ ಮಾದರ್ ಚಾಲಕರನ್ನು ಎಚ್ಚರಿಸಲು ಪ್ರಯತ್ನಿಸಿದರಾದರೂ ಎಚ್ಚರಗೊಳ್ಳದ ಕಾರಣ ಹೊದಿಕೆ ಸರಿಸಿ ನೋಡಿದಾಗ ಅಸುನೀಗಿರುವ ವಿಚಾರ ತಳಿದು ಅಕ್ಕಪಕ್ಕದವರಿಗೆ ವಿಚಾರ ತಿಳಿಸಿದ್ದಾರೆ. ಗ್ರಾಮಸ್ಥರು ಆನಂದ್ ನಿಧನಹೊಂದಿರುವ ವಿಚಾರ ತಿಳಿದು ಚನ್ನಪಟ್ಟಣ ಗ್ರಾಮಾಂತರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಮತ್ತು ಕೆಎಸ್ಆರ್ಟಿಸಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಯಿತು.
ಮರಣೋತ್ತರ ಪರೀಕ್ಷೆಯ ನಂತರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ರಾಮನಗರ KSRTC ಬಸ್ ನಿಲ್ದಾಣಕ್ಕೆ ತರಲಾಯಿತು. ಮಧ್ಯಾಹ್ನದವರಗೆ ಸಾರ್ವಜನಿಕರು ಅಂತಿಮ ದರ್ಶನ ಪಡೆದ ನಂತರ ಸಂಜೆ ಕ್ಯಾಸಾಪುರ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ರಾಮನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕೂಟಗಲ್ ಹೋಬಳಿ ಘಟಕದ ಅಧ್ಯಕ್ಷ ರಾಗಿದ್ದ ಕೆ.ಎನ್. ಆನಂದ್ ಅವರು ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಸಂತಾಪ : ಕೆ.ಎನ್. ಆನಂದ್ ಅವರ ನಿಧನಕ್ಕೆ ಮಾಗಡಿ ಶಾಸಕ ಎ.ಮಂಜುನಾಥ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕರಾದ ಎಚ್.ಬಿ.ಶಿವರಾಜು, ಕನ್ನಡ ಸಾಹಿತ್ಯ ಪರಿಷತ್ ರಾಮನಗರ ತಾಲೂಕು ಅಧ್ಯಕ್ಷ ಬಿ.ಟಿ.ದಿನೇಶ್, ಬಿಜಿಎಸ್ ಭಕ್ತವೃಂದದ ಹೋಟೆಲ್ ಉಮೇಶ್, ಸಿದ್ದಲಿಂಗೇಗೌಡ (ಮಧು), ತಾಲೂಕು ಒಕ್ಕಲಿಗರ ಸಂಘ, ಕೆ.ಎಸ್.ಆರ್.ಟಿ.ಸಿ. ನೌಕರ ಬಳಗ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಸಂತಾಪ ಸೂಚಿಸಿವೆ.
![](https://vijayapatha.in/wp-content/uploads/2024/02/QR-Code-VP-1-1-300x62.png)