ಕೃಷಿನಮ್ಮಜಿಲ್ಲೆನಮ್ಮರಾಜ್ಯ

ಮೈಸೂರು: ಕೆರೆ ಕಟ್ಟೆ ತುಂಬಿಸುವಂತೆ ಕಾಡಾ ಕಚೇರಿ ಮುಂದೆ ರೈತರ ಪ್ರತಿಭಟನೆ- ಆಕ್ರೋಶ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಕಾವೇರಿ ಕಬಿನಿ ಅಚ್ಚುಕಟ್ಟು ಭಾಗದ ನಾಲೆಗಳಿಗೆ ನೀರು ಹರಿಸಿ ಕೆರೆ ಕಟ್ಟೆ ತುಂಬಿಸುವಂತೆ ಕಾಡಾ ಕಚೇರಿಯ ಮುಂದೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಮುಖಂಡರು ಹಾಗೂ ರೈತರು ಪ್ರತಿಭಟನೆ ಮಾಡಿ ಕಾಡಾ ಡಿಪ್ಯೂಟಿ ಇಂಜಿನಿಯರ್ ಗೌತಮ್‌ ಅವರಿಗೆ  ಒತ್ತಾಯ ಪತ್ರ ಸಲ್ಲಿಸಿದ್ದಾರೆ.

ಇಂದು ಬೆಳಗ್ಗೆ ಕಾಡಾ ಕಚೇರಿ ಮುಂದೆ ಜಮಾಯಿಸಿದ ನೂರಾರು ರೈತರು ಕಾವೇರಿ – ಕಬಿನಿ ಅಚ್ಚುಕಟ್ಟು ಭಾಗದಲ್ಲಿ ಕೆರೆ ಕಟ್ಟೆಗಳು ಬರಿದಾಗುತ್ತಿದ್ದು ಹಾಲಿ ಬೆಳೆದು ನಿಂತಿರುವ ಕಬ್ಬು, ಅಡಿಕೆ, ತೆಂಗು, ಬಾಳೆ ಇನ್ನಿತರೆ ಬೆಳೆಗಳು ಬಿಸಿಲಿನ ತಾಪಕ್ಕೆ ಒಣಗಿ ಹಾಳಾಗುತ್ತಿವೆ, ಹೀಗಾಗಿ ಕರೆ ಕಟ್ಟೆಗಳಿಗೆ ನೀರು ಹರಿಸಿ ಬೆಳೆಗಳನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.

ಇನ್ನು ಇತ್ತ ಕಾವೇರಿ – ಕಬಿನಿ ಅಚ್ಚು ಕಟ್ಟು ಪ್ರದೇಶದ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ ಹಾಗೂ ಕೃಷಿ ಪಂಪ್‌ಸೆಟ್ ಗಳಿಗೆ ಅಂತರ್ಜಲ ಕುಸಿದಿದ್ದು ನೀರಿಲ್ಲದೆ  ತೋಟದ ಬೆಳೆಗಳಾದ ಹಣ್ಣು, ತರಕಾರಿ ಇನ್ನಿತರೆ ಬೆಳೆಗಳು ಬಿಸಿಲಿನ ತಾಪಕ್ಕೆ ಒಣಗುತ್ತಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ಕಿಡಿಕಾರಿದರು.

ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಹಾಗೂ ಜನ ಜಾನುವಾರುಗಳ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುತ್ತಿದ್ದು, ಸಮಸ್ಯೆ ಅರಿತು ತುರ್ತಾಗಿ ನಾಲೆಗಳ ಮೂಲಕ ಕಾವೇರಿ ಅಚ್ಚು ಕಟ್ಟು ಭಾಗದ ವಿಸಿ ನಾಲೆ, ವರುಣಾ ನಾಲೆಯ ಶಾಖಾ ನಾಲೆ ಹಾಗೂ ಉಪ ಶಾಖಾ ನಾಲೆಗಳು, ಮತ್ತು ಚಿಕ್ಕದೇವರಾಯ ಬಡಾವಣೆ ನಾಲೆಗಳಿಗೆ ಹಾಗೂ ಕಬಿನಿ ಜಲಾಶಯದ ಬಲದಂಡೆ ನಾಲೆಗಳಿಗೆ ನೀರು ಹರಿಸಿ ಹಾಲಿ ಬೆಳೆದು ನಿಂತಿರುವ ಬೆಳೆಗಳಿಗೆ ನೀರು ಕೊಡಬೇಕು ಎಂದು ಒತ್ತಾಯಿಸಿದರು.

ಇನ್ನು ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಂತರ್ಜಲ ಅಭಿವೃದ್ದಿಗಾಗಿ ತುರ್ತಾಗಿ ನೀರು ಹರಿಸಿ ಕೆರೆ ಕಟ್ಟೆಗಳನ್ನು ತುಂಬಿಸಬೇಕು. ಕೆಆರ್ಎಸ್ ವಿಭಾಗದ ನಂ4 ಉಪ ವಿಭಾಗಕ್ಕೆ ಸೇರಿದ ಬನ್ನೂರು ದೊಡ್ಡಕೆರೆ ಬಲದಂಡೆ ನಾಲೆ, ಎಡದಂಡೆ  ನಾಲೆಗಳನ್ನು ಆಧುನೀಕರಣ ಮಾಡುವುದಾಗಿ ಕುಂಟು ನೆಪ ಹೇಳಿಕೊಂಡು ಬರುತ್ತಿರುವುದು ಸರಿಯಾದ ಕ್ರಮವಲ್ಲ ಈ ಬಾರಿ ಕಾಮಗಾರಿ ಪ್ರಾರಂಭ ಮಾಡಿ ಪೂರ್ಣ ಗೊಳಿಸಬೇಕೆಂದು ಆಗ್ರಹಿಸಿದರು.

ರೈತರು ಕಾಡಾ ಕಚೇರಿಯ ಮುಂದೆ ಘೋಷಣೆ ಕೂಗುತ್ತಾ ಒಳ ನುಗ್ಗಲು ಯತ್ನಿಸಿದಾಗ ಒಳಗಡೆ  ಹೋಗದಂತೆ ಪೊಲೀಸ್ ಅಧಿಕಾರಿಗಳು ಕಚೇರಿಯ ಮುಖ್ಯಬಾಗಿಲು ಮುಂಭಾಗ ಬ್ಯಾರಿಕೆಟ್ ಹಾಕಿ ರೈತರನ್ನು ಒಳಗಡೆ ಬಿಡಲು ನಿರಾಕರಿಸಿದರು. ಇದರಿಂದ ಆಕ್ರೋಶಗೊಂಡ ರೈತರು  ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

Advertisement

ಈ ವೇಳೆ   ರೈತ ಮುಖಂಡರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತ ಆಕ್ರೋಶ ವ್ಯಕ್ತಪಡಿಸಿದರು. ಇದು ತೀವ್ರಗೊಳ್ಳುತ್ತದೆ ಎನ್ನುವುದನ್ನು  ಅರಿತ ಪೊಲೀಸ್ ಅಧಿಕಾರಿಗಳು ಬ್ಯಾರಿಕೇಟ್ ತೆರವುಗೊಳಿಸಿ ಕಾಡ ಕಚೇರಿಯ ಡೆಪ್ಯೂಟಿ ಇಂಜಿನಿಯರ್ ಗೌತಮ್ ಅವರನ್ನು  ರೈತರು ಇದ್ದ ಸ್ಥಳಕ್ಕೆ ಕರೆತಂದರು ರೈತರು ಒತ್ತಾಯ ಪತ್ರವನ್ನು ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಅತ್ತಹಳ್ಳಿ ದೇವರಾಜು, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಲಕ್ಷ್ಮಿಪುರ ವೆಂಕಟೇಶ್, ಮಾರ್ಬಳ್ಳಿ ನೀಲಕಂಠಪ್ಪ, ಸತೀಶ್ ಕೇರ್ಗಳ್ಳಿ, ಶಿವಕುಮಾರ್ ಕೆರ್ಗಳ್ಳಿ, ಧನಗಳ್ಳಿ ಕೆಂಡಗಣ್ಣಸ್ವಾಮಿ, ಜಯರಾಮ ವರಕೋಡು, ವರಕೋಡು ನಾಗೇಶ್, ಕೆಂಪೇಗೌಡನ ಕೊಪ್ಪಲು ಕೆ.ಶಿವಶಂಕರ, ಕೆ.ಸಿ.ನಾಗರಾಜು ಕೊಳ್ಳೇಗೌಡ ಕುಂತನಹಳ್ಳಿ, ಪಿ.ನಾಗೇಂದ್ರ, ವಾಜಮಂಗಲ, ಮಾದೇವ,  ಮಹಾಲಿಂಗ, ಬಸವರಾಜು ಸಾತಗಳ್ಳಿ, ಮಾರ್ಬಳ್ಳಿ ಬಸವರಾಜ್ ಇನ್ನಿತರರು ಭಾಗವಹಿಸಿದ್ದರು.

ವಿಜಯಪಥ - vijayapatha
Deva
the authorDeva

Leave a Reply

error: Content is protected !!