ಬೆಂಗಳೂರು ಗ್ರಾಮಾಂತರ: ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದ ರಾಜ್ಯ ಮಟ್ಟದ ಗ್ರಾಮೀಣ ಕ್ರೀಡಾಕೂಟದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಅಣ್ಣೀಶ್ವರ ಗ್ರಾಮ ಪಂಚಾಯಿತಿಯ ಯುವಕರ ವಾಲಿಬಾಲ್ ತಂಡವು ಪ್ರಥಮ ಸ್ಥಾನ ಹಾಗೂ ಚನ್ನಹಳ್ಳಿ ಗ್ರಾಮ ಪಂಚಾಯಿತಿಯ ಯುವತಿಯರ ಕಬಡ್ಡಿ ತಂಡವು ದ್ವಿತೀಯ ಸ್ಥಾನ ಪಡೆದು ಸಂಭ್ರಮಿಸಿದೆ.
ರಾಜ್ಯ ಮಟ್ಟದ ಗ್ರಾಮೀಣ ಕ್ರೀಡಾಕೂಟದ ಪುರುಷರ ವಾಲಿಬಾಲ್ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಮತ್ತು ಮಹಿಳೆಯರ ಕಬಡ್ಡಿ ಕ್ರೀಡೆಯಲ್ಲಿ ದ್ವಿತೀಯ ಸ್ಥಾನ ಪಡೆದ ಜಿಲ್ಲೆಯ ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹಾಯಕ ನಿರ್ದೇಶಕಿ ಗೀತಾ ಅವರು ಅಭಿನಂದನೆ ಸಲ್ಲಿಸಿದರು.
ಗ್ರಾಮೀಣ ಪ್ರತಿಭೆಗಳು ಹೊರಹೊಮ್ಮಬೇಕು ಎಂದು ಇದೇ ವೇಳೆ ಕರೆ ನೀಡಿದ ಗೀತಾ ಅವರು ಹಳ್ಳಿಯ ಮಕ್ಕಳಲ್ಲಿ ಪ್ರತಿಭೆ ನಗರ ಮಕ್ಕಳಿಗಿಂತ ತುಸು ಹೆಚ್ಚಾಗಿಯೇ ಇರುತ್ತದೆ ಆದರೆ ಆ ಪ್ರತಿಭೆ ಗುರುತಿಸುವಲ್ಲಿ ನಮ್ಮ ಸುತ್ತಮುತ್ತಲಿರುವವರು ಮತ್ತು ಉತ್ತೇಜನ ನೀಡಬೇಕಿರುವವರು ವಿಫಲರಾಗುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.