ನ್ಯೂಡೆಲ್ಲಿ: ಕಾಯಂ ಸಿಬ್ಬಂದಿಗೆ ಸರಿಸಮನಾಗಿ ಕೆಲಸ ಮಾಡುವ ದಿನಗೂಲಿ ನೌಕರರು, ಗುತ್ತಿಗೆ ನೌಕರರೂ ಸಮಾನ ವೇತನ ಪಡೆಯಲು ಅರ್ಹರು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್‌ನ ಈ ತೀರ್ಪು ದೇಶದ ಲಕ್ಷಾಂತರ ಗುತ್ತಿಗೆ ನೌಕರರ ಪಾಲಿಗೆ ವರದಾನವಾಗಲಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡದಿರುವುದನ್ನು ”ಶೋಷಣೆಯುತ ಜೀತ, ದಬ್ಬಾಳಿಕೆ ಮತ್ತು ದಮನಕಾರಿ ಧೋರಣೆ,” ಎಂದು 2016ರಲ್ಲೇ ಬಣ್ಣಿಸಿರುವ ಉನ್ನತ ನ್ಯಾಯಾಲಯ, ಕಲ್ಯಾಣ ರಾಜ್ಯದ ತತ್ವದಡಿ ಸಮಾನ ವೇತನ ನಿಯಮವನ್ನು ತಾತ್ಕಾಲಿಕ ನೌಕರರಿಗೂ ವಿಸ್ತರಿಸಬೇಕು ಎಂದು ಸೂಚಿಸಿದೆ.
ಶ್ರಮದ ಪ್ರತಿಫಲ ನಿರಾಕರಣೆಯನ್ನು ಕೃತಕ ಮಾನದಂಡಗಳಿಂದ ನಿರ್ಧರಿಸುವುದು ದೋಷಪೂರಿತ ನಡೆ. ಒಂದು ಕೆಲಸವನ್ನು ಮಾಡುವ ಒಬ್ಬ ನೌಕರನಿಗೆ ಅದೇ ಕೆಲಸ ಮತ್ತು ಜವಾಬ್ದಾರಿ ನಿರ್ವಹಿಸುವ ಮತ್ತೊಬ್ಬನಿಗಿಂತ ಕಡಿಮೆ ವೇತನ ನೀಡುವುದು ಸಲ್ಲದು. ಕಲ್ಯಾಣ ರಾಜ್ಯದಲ್ಲಿ ಇಂತಹ ನಿಯಮಕ್ಕೆ ಅರ್ಥವಿಲ್ಲ. ಇದು ಮಾನವ ಘನತೆಯ ಮೂಲಕ್ಕೇ ಧಕ್ಕೆ ತರುತ್ತದೆ, ಎಂದು ನ್ಯಾಯಮೂರ್ತಿಗಳಾದ ಜೆ.ಎಸ್. ಖೇಹರ್ ಮತ್ತು ಎಸ್. ಎ ಬಾಬ್ಡೆ ಅವರನ್ನೊಳಗೊಂಡ ಪೀಠ 31 Oct 2016ರಂದೆ ಅಭಿಪ್ರಾಯಪಟ್ಟಿದೆ.
ಯಾರೇ ಆದರೂ, ಅನಿವಾರ್ಯವಾಗಿ ಕಡಿಮೆ ವೇತನಕ್ಕೆ ಕೆಲಸ ನಿರ್ವಹಿಸುತ್ತಾರೆಯೇ ಹೊರತು ಸ್ವಯಂಪ್ರೇರಿತವಾಗಿ ಅಲ್ಲ. ಅದೇ ಕೆಲಸ ಮಾಡುವ ಮತ್ತೊಬ್ಬ ವ್ಯಕ್ತಿಗಿಂತ ಕಡಿಮೆ ವೇತನ ನೀಡುವುದು ದಬ್ಬಾಳಿಕೆ, ಶೋಷಣೆ, ಎಂದು ಅಂದೇ ನ್ಯಾಯಪೀಠ ಹೇಳಿದೆ.
ಅಂತಾರಾಷ್ಟ್ರೀಯ ಒಪ್ಪಂದದ ಪ್ರಸ್ತಾಪ: ಸುಪ್ರೀಂ ಕೋರ್ಟ್, ತನ್ನ ತೀರ್ಪಿನಲ್ಲಿ 1966ರ ‘ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಕುರಿತಾದ ಅಂತಾರಾಷ್ಟ್ರೀಯ ಒಪ್ಪಂದ’ವನ್ನು ಉಲ್ಲೇಖಿಸಿದೆ. 1979ರ ಏಪ್ರಿಲ್ 10ರಂದು ಭಾರತ ಈ ಒಪ್ಪಂದಕ್ಕೆ ಸಹಿ ಹಾಕಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ನಿರಾಕರಣೆಯು ಈ ಒಪ್ಪಂದದ 7ನೇ ವಿಧಿಯ ಉಲ್ಲಂಘನೆ. ಈ ಕಡ್ಡಾಯ ನಿಯಮ ಅನುಸರಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಪಂಜಾಬ್ ನೌಕರರ ಅರ್ಜಿ ವಿಚಾರಣೆ: ಕಾಯಂ ನೌಕರರಲ್ಲ ಎಂಬ ಒಂದೇ ಕಾರಣಕ್ಕಾಗಿ ಸಮಾನ ವೇತನ ನೀಡಲು ನಿರಾಕರಿಸಿದ ಪಂಜಾಬ್ ಸರಕಾರದ ಕ್ರಮವನ್ನು ಪ್ರಶ್ನಿಸಿ ಕೆಲ ಗುತ್ತಿಗೆ ನೌಕರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಮಹತ್ವದ ತೀರ್ಪು ನೀಡಿದೆ.
ಹೈಕೋರ್ಟ್ ಆದೇಶಕ್ಕೆ ತಡೆ: ಈ ಮಧ್ಯೆ, ಗುತ್ತಿಗೆ ನೌಕರರು ಸಮಾನ ವೇತನಕ್ಕೆ ಅರ್ಹರಲ್ಲ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ್ದ ತೀರ್ಪು ಜಾರಿಗೆ ಸುಪ್ರೀಂ ತಡೆ ನೀಡಿದೆ. ಅರ್ಜಿದಾರರಿಗೆ ಸಮಾನ ಹುದ್ದೆಯಲ್ಲಿರುವ ಕಾಯಂ ನೌಕರರು ಪಡೆಯುತ್ತಿರುವ ವೇತನ ಶ್ರೇಣಿಯ ಕನಿಷ್ಠ ಮೊತ್ತವನ್ನಾದರೂ ನೀಡಬೇಕೆಂದು ಪಂಜಾಬ್ ಸರಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಆದರೆ ಕರ್ನಾಟಕದಲ್ಲಿ ಈಗಲೂ ಲಕ್ಷಾಂತರ ಮಂದಿ ಸರಿ ಸಮಾನ ವೇತನವಿಲ್ಲದೆ ದುಡಿಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅದೇ ರೀತಿ ಕಾಯಂ ನೌಕರರು ಆಗಿರುವ ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಸಿಗುತ್ತಿಲ್ಲ ಎಂಬುವುದು ಆಶ್ಚರ್ಯವಾದರೂ ಪ್ರಸ್ತುತ ಸತ್ಯವಾಗಿದೆ. ಹೀಗಾಗಿ ನೌಕರರು ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಅವರ ಹೋರಾಟಕ್ಕೆ ಸರ್ಕಾರ ಮನ್ನಣೆ ನೀಡದಿರುವುದು ಖೇದಕರ ಸಂಗತಿಯಾಗಿದೆ.