ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಗಳಲ್ಲಿ ಗುತ್ತಿಗೆ ನೀಡಿರುವ ಮಳಿಗೆಗಳು ಮತ್ತು ಶೌಚಗೃಹಗಳ ಗುತ್ತಿಗೆ ಪರವಾನಗಿ ನವೀಕರಿಸುವಾಗ ವ್ಯವಸ್ಥಾಪಕ ನಿರ್ದೇಶಕರ ಸಹಿ ನಕಲಿ ಮಾಡಿ ಗುತ್ತಿಗೆ ನೀಡುತ್ತಿದ್ದ ಜಾಲ ಪತ್ತೆ ಹಚ್ಚುವಲ್ಲಿ ನಿಗಮದ ಸಹಾಯಕ ಭದ್ರತಾ ಮತ್ತು ಜಾಗೃತಾಧಿಕಾರಿ ಸಿ.ಕೆ.ರಮ್ಯಾ ಮತ್ತು ತಂಡ ಯಶಸ್ವಿಯಾಗಿದೆ.
ಎಂಡಿಗಳ ಸಹಿಯನ್ನೇ ನಕಲಿಮಾಡಿ ಮಳಿಗೆಗಳು, ಶೌಚಗೃಹಗಳ ಗುತ್ತಿಗೆ ಪರವಾನಗಿ ನವೀಕರಿಸುವ ಮೂಲಕ ನವೀಕರಣದ ಹಣವನ್ನು ತಮ್ಮ ಕಿಸೆಗೆ ಇಳಿಸಿಕೊಂಡು ಸಂಸ್ಥೆಗೆ ನಷ್ಟವುಂಟು ಮಾಡುತ್ತಿದ್ದ ಅಧಿಕಾರಿಗಳ ಹೆಡೆಮುರಿಕಟ್ಟಲು ಮುಂದಾಗಿರುವ ರಮ್ಯಾ ಮತ್ತು ತಂಡ ಈ ಸಂಬಂಧ ಪೊಲೀಸ್ಠಾಣೆಯಲ್ಲಿ ದೂರು ದಾಖಲಿಸಿದೆ.
ಬಿಎಂಟಿಸಿ ಸಹಾಯಕ ಭದ್ರತಾ ಮತ್ತು ಜಾಗೃತಾಧಿಕಾರಿ ಸಿ.ಕೆ. ರಮ್ಯಾ ಅವರು ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಇದೇ ಜ.25ರಂದು ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇರೆಗೆ ಆರೋಪಿಯಾದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಿರ್ದೇಶಕ ಶ್ರೀರಾಮ ಮುಲ್ಕಾವಾನ್ ಮತ್ತು ಇತರ ಸಿಬ್ಬಂದಿ ವಿರುದ್ಧ ಕೇಸ್ ದಾಖಲಿಸಿ ತನಿಖೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೆಂಪೇಗೌಡ ಬಸ್ ನಿಲ್ದಾಣದ ಕೆಎಂಎಫ್ ಹಾಲಿನ ಮೂರು ಮಳಿಗೆ (ನಂ. 10, 15 ಮತ್ತು 16) ಶಿವಾಜಿನಗರ ಬಸ್ ನಿಲ್ದಾಣದ 2 ಶೌಚಗೃಹಗಳ ಪರವಾನಗಿ ನವೀಕರಣ ಹಾಗೂ ಬಿಟಿಎಂ ಲೇಔಟ್ ಟಿಟಿಎಂಸಿ ಮತ್ತು ವಿಜಯನಗರ ಟಿಟಿಎಂಸಿಯಲ್ಲಿ ಹೆಚ್ಚುವರಿ ಜಾಗ ಹಂಚಿಕೆ ಸಂಬಂಧ ಉನ್ನತ ಅಧಿಕಾರಿಗಳ ಸಹಿ ನಕಲಿ ಮಾಡಿರುವ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಕೂಲಂಕಷವಾಗಿ ತನಿಖೆಗೆ ಸಿ.ಕೆ. ರಮ್ಯಾ ಅವರಿಗೆ ವಹಿಸಲಾಗಿತ್ತು.
ಪ್ರಾಥಮಿಕ ವಿಚಾರಣೆ ವೇಳೆ 2020ರ ಮಾರ್ಚ್ 9ರಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿ ವಾಣಿಜ್ಯ ಶಾಖೆಯ ಅಂದಿನ ಮುಖ್ಯ ಸಂಚಾರ ವ್ಯವಸ್ಥಾಪಕರಾಗಿದ್ದ ಶ್ರೀರಾಮ ಮುಲ್ಕಾವಾನ್ ಮತ್ತು ಇತರ ಅಧಿಕಾರಿಗಳು ಸೇರಿಕೊಂಡು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಶಿಖಾ, ಅನುಕುಮಾರ್, ಸತ್ಯವತಿ ಮತ್ತು ಭದ್ರತಾ ಮತ್ತು ಜಾಗೃತದಳದ ನಿರ್ದೇಶಕರಾದ ಜಿ.ರಾಧಿಕಾ ಮತ್ತು ಸೂರ್ಯಸೇನಾ (ಮಾಹಿತಿ ಮತ್ತು ತಂತ್ರಜ್ಞಾನ) ಸಹಿಗಳನ್ನು ನಕಲು ಮಾಡಿ ಕರಾರು ಒಪ್ಪಂದದ ಆದೇಶ ಪತ್ರ ನೀಡಿ ಬಿಎಂಟಿಸಿಗೆ ನಷ್ಟ ಉಂಟು ಮಾಡಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ರಮ್ಯಾ ಮನವಿ ಮಾಡಿದ್ದಾರೆ.
ಬಿಎಂಟಿಸಿ ಸಂಸ್ಥೆಗೆ ನಷ್ಟವುಂಟು ಮಾಡಿದ ಆರೋಪದಡಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಿರ್ದೇಶಕ ಶ್ರೀರಾಮ ಮುಲ್ಕಾವಾನ್ ಮತ್ತು ಇತರ ಸಿಬ್ಬಂದಿ ವಿರುದ್ಧ ದಾಖಲಾಗಿರುವ FIR ಪ್ರತಿಗಾಗಿ ಇಲ್ಲಿ ಕ್ಲಿಕ್ಮಾಡಿ: 10443138820230016