ರಾಯಚೂರು: ಇಲ್ಲಿನ ಸಾರಿಗೆ ಬಸ್ ನಿಲ್ದಾಣದ ಒಳಗೇ ಖಾಸಗಿ ವಾಹನಗಳ ದರ್ಬಾರ್ ಜೋರಾಗಿದ್ದು, ಪ್ರಯಾಣಿಕರನ್ನು ಬಸ್ನಿಲ್ದಾಣದೊಳಕ್ಕೇ ಬಂದು ರಾಜಾರೋಷವಾಗಿ ಹತ್ತಿಸಿಕೊಂಡು ಹೋಗುತ್ತಿದ್ದಾರೆ.
ಇತಿಹಾಸದಲ್ಲೇ ಈ ರೀತಿ ಸಾರಿಗೆ ಬಸ್ ನಿಲ್ದಾಣಕ್ಕೆ ಖಾಸಗಿ ವಾಹನಗಳು ಬರುತ್ತಿರುವುದು ಇದೇ ಮೊದಲು. ಹೀಗಿದ್ದರೂ ಅಧಿಕಾರಿಗಳು ಖಾಸಗಿ ವಾಹನಗಳನ್ನು ತಡೆಯುವಲ್ಲಿ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ.
ಹೌದು! ಇದು ಅಧಿಕಾರಗಳ ನಿರ್ಲಕ್ಷ್ಯವಾಗಿದ್ದು, ಹೇಳುವವರು ಕೇಳುವವರು ಇಲ್ಲದಂತಾಗಿದೆ. ಅಧಿಕಾರಿಗಳ ಈ ನಡೆಯಿಂದ ಖಾಸಗಿಯವರಿಗೆ ಹಬ್ಬವಾಗಿದ್ದು ಸಾರಿಗೆ ಬಸ್ಗಳ ಆದಾಯಕ್ಕೆ ಕತ್ತರಿ ಬೀಳುತ್ತಿದೆ.
ಇನ್ನು ಅಧಿಕಾರಿಗಳು ನಿರ್ವಾಹಕರಿಗೆ ಆದಾಯವನ್ನು ಹೆಚ್ಚಿಗೆ ತರಬೇಕು ಎಂದು ಉತ್ತರನ ಪೌರುಷ ಒಲೆಮುಂದೆ ಎಂಬಂತೆ ಕಿರಿ ಕಿರಿ ಮಾಡುತ್ತಿರುತ್ತಾರೆ. ಆದರೆ ಈ ರೀತಿ ಖಾಸಗಿ ವಾಹನಗಳು ಬರುತ್ತಿದ್ದರು ಅವುಗಳನ್ನು ತಡೆಯುವುದಕ್ಕೆ ಮಾತ್ರ ಮುಂದಾಗುತ್ತಿಲ್ಲ.
ಸಾರಿಗೆ ಸಂಸ್ಥೆಯ ನಿರ್ವಾಹಕರು ಇದರಿಂದ ಬೇಸತ್ತಿದ್ದಾರೆ. ಅಧಿಕಾರಿಗಳು ಆದಾಯ ಹೆಚ್ಚಿಗೆ ತರುವಂತೆ ಕಿರುಕುಳ ನೀಡುತ್ತಿದ್ದರೆ. ಇತ್ತ ಪ್ರಯಾಣಿಕರು ಇಲ್ಲದೆ ಖಾಲಿ ಬಸ್ಗಳನ್ನೇ ಓಡಿಸುವ ಪರಿಸ್ಥಿತಿ ಬಂದಿದೆ.
ಇದಕ್ಕೆಲ್ಲ ಕಾರಣ ಅಧಿಕಾರಿಗಳ ಜಾಣಮೌನವಾಗಿದೆ. ನಿಲ್ದಾಣದೊಳಕ್ಕೆ ಬೈಕ್ ಬಂದಿತು ಎಂದು ನಿಲ್ದಾಣದ ಹೊಣೆ ಹೊತ್ತಿದ್ದ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದು ನಮ್ಮ ಮುಂದೆಯೇ ಇದೆ.
ಆದರೆ, ಇಲ್ಲಿ ಖಾಸಗಿ ವಾಹನಗಳು ನಿಲ್ದಾಣಕ್ಕೇ ಬಂದು ಜನರನ್ನು ಹತ್ತಿಸಿಕೊಂಡು ಹೋಗುತ್ತಿರುವುದಕ್ಕೆ ಏನು ಕ್ರಮ ಜರುಗಿಸುತ್ತಾರೆ ಎಂದು ನೌಕರರು ಪ್ರಶ್ನಿಸುತ್ತಿದ್ದಾರೆ.