ಉಡುಪಿ: ಜಿಲ್ಲೆಯಲ್ಲಿ ಗುರುವಾರ ನಡೆದ ದ್ವಿತೀಯ ಪಿಯು ಕನ್ನಡ ಪರೀಕ್ಷೆಗೆ 8,954 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದು, 8836 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 118 ಮಂದಿ ಗೈರಾಗಿದ್ದಾರೆ ಎಂದು ಪಿಯು ಇಲಾಖೆಯ ಉಪ ನಿದೇಶಕ ಭಗವಂತ ಕಟ್ಟಿಮನಿ ತಿಳಿಸಿದ್ದಾರೆ.
ವಾರದ ಸಂತೆ, ಜಾತ್ರೆ, ಸಾಮೂಹಿಕ ವಿವಾಹಕ್ಕೆ ತಡೆ
ಸರ್ಕಾರದ ಆದೇಶದಂತೆ, ಉಡುಪಿ ಜಿಲ್ಲಾಧಿಕಾರಿಗಳ ಮಾ.18 ರ ಆದೇಶದಲ್ಲಿ ತಿಳಿಸಿರುವಂತೆ, ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು, ಜನಸಂದಣಿ ಸೇರುವ ಕಾರ್ಯಗಳಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚು ಇರುವ ಕಾರಣದಿಂದ ಸಾರ್ವಜನಿಕರು ಕೆಲವು ವಿಶೇಷ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ ಸೂಚಿಸಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಉಡುಪಿ ಜಿಲ್ಲೆಯಲ್ಲಿ ಜರುಗುವ ಎಲ್ಲಾ ಧಾರ್ಮಿಕ ಸಂಸ್ಥೆಗಳಿಗೆ ಸೇರಿದ ಜಾತ್ರೆಗಳು, ಸಭೆ, ಸಮಾರಂಭಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ವಾರದ ಸಂತೆ, ಜಾತ್ರೆ, ಉತ್ಸವ, ಸಾಮೂಹಿಕ ವಿವಾಹಗಳು ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ ಎಂದು ನಗರಸಭೆಯ ಪೌರಾಯುಕ್ತ ಆನಂದ ಕಲ್ಲೋಳಿಕರ್ ತಿಳಿಸಿದ್ದಾರೆ.
ಉಡುಪಿ ರೈಲ್ವೆ ನಿಲ್ದಾಣದಲ್ಲಿ ತಪಾಸಣೆ
ಕೊರೊನಾ ವೈರಸ್ ಭೀತಿ ಹಿನ್ನೆಲೆ ರೈಲ್ವೆ ಇಲಾಖೆ ವತಿಯಿಂದ, ಉಡುಪಿ ರೈಲ್ವೆ ನಿಲ್ದಾಣದಲ್ಲಿ ಕೊರೊನಾ ತಪಾಸಣಾ ಮತ್ತು ಸಹಾಯವಾಣಿಯನ್ನು ತೆರೆಯಲಾಗಿದ್ದು, ಪ್ರಯಾಣಿಕರ ಪರೀಕ್ಷೆ ನಡೆಸಲಾಯಿತು.
ರೋಗಿ ಗುಣಮುಖ- ವಾರಸುದಾರರಿಗೆ ಸೂಚನೆ
ಜಿಲ್ಲಾ ಆಸ್ಪತ್ರೆ ಉಡುಪಿಯಲ್ಲಿ ಒಳರೋಗಿಯಾಗಿ ದಾಖಲಾದ ವಿಠ್ಠಲ್ ನಾಯಕ್ (70) ಎಂಬ ವ್ಯಕ್ತಿಯು ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದು, ವಾರಸುದಾರರು ಯಾರಾದರು ಇದ್ದಲ್ಲಿ ಆಸ್ಪತ್ರೆಯಿಂದ ಕರೆದುಕೊಂಡು ಹೋಗಲು ಜಿಲ್ಲಾ ಆಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0820-2520555 / 9449827833 ನ್ನು ಸಂಪರ್ಕಿಸುವಂತೆ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು ತಿಳಿಸಿದ್ದಾರೆ.