ಮಡಿಕೇರಿ: ಕೇತುಮೊಟ್ಟೆ ನಿರ್ಬಂಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದಾರೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಕಣ್ಣಂಗಾಲದ ಹಾಲುಗುಂದ ಉಪ ಕೇಂದ್ರ ವ್ಯಾಪ್ತಿಯ ಕೇತುಮೊಟ್ಟೆ ಗ್ರಾಮಕ್ಕೆ ಬಂದಿರುವ ವ್ಯಕ್ತಿಯೋರ್ವರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಈ ಗ್ರಾಮದ 500 ಮೀಟರ್ ಪ್ರದೇಶವನ್ನು ಕಂಟೈನ್‍ಮೆಂಟ್ ಪ್ರದೇಶ ಎಂದು ಹಾಗೂ ಇದರ ಪಕ್ಕದ ಗ್ರಾಮ ಕೊಂಡಂಗೇರಿಯನ್ನು ಬಫರ್ ಜೋನ್ ಎಂದು ಪರಿಗಣಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕೋರಿದ್ದರು. ಸಾರ್ವಜನಿಕ ಹಿತಾಸಕ್ತಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ, ಕೇತುಮೊಟ್ಟೆ ಗ್ರಾಮದಲ್ಲಿರುವ ಒಟ್ಟು 75 ಮನೆಗಳಲ್ಲಿ 304 ಮಂದಿ ವಾಸಿಸುತ್ತಿದ್ದು ಈ ಗ್ರಾಮದ 500 ಮೀಟರ್ ವ್ಯಾಪ್ತಿಯ ಭೌಗೋಳಿಕ ಪ್ರದೇಶವನ್ನು ಕಂಟೈನ್‍ಮೆಂಟ್ ಏರಿಯಾ ಎಂದು ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಕಾಲ್ನಡಿಗೆ ಅಥವಾ ವಾಹನದ ಮೂಲಕ ಅಥವಾ ಇನ್ಯಾವುದೇ ರೀತಿಯಿಂದ ಈ ಪ್ರದೇಶದ ಒಳ ಪ್ರವೇಶ ಮತ್ತು ಹೊರ ಪ್ರವೇಶವನ್ನು ಕಡ್ಡಾಯವಾಗಿ ನಿಷೇದಿಸಿದೆ. ಈ ನಿಷೇದಿತ ಪ್ರದೇಶದ ಎಲ್ಲಾ ಕಚೇರಿಗಳು, ಅಂಗಡಿ ಮಳಿಗೆ, ದಾಸ್ತಾನು ಕೇಂದ್ರ, ಎಲ್ಲಾ ಅವಶ್ಯ ಮತ್ತು ತುರ್ತು ಸೇವೆಗಳನ್ನು ನೀಡುವ ಮಳಿಗೆಗಳನ್ನು ಮುಚ್ಚುವುದು, ಯಾವುದೇ ಅಗತ್ಯ ವಸ್ತುಗಳ ಪೂರೈಕೆಯನ್ನು ಸಂಬಂಧಪಟ್ಟ ಇಲಾಖೆಗಳ ಮೂಲಕ ಕೈಗೊಳ್ಳುವುದು, ಇದನ್ನು ಹೊರತುಪಡಿಸಿ ಯಾವುದೇ ಖಾಸಗಿ ಮೂಲಗಳಿಂದ ನೀಡುವಂತಿಲ್ಲ. ಈ ಪ್ರದೇಶದಲ್ಲಿರುವ ಎಲ್ಲಾ ಮನೆಗಳಲ್ಲಿನ ಸದಸ್ಯರು ಅವರ ಮನೆ ಬಿಟ್ಟು ಹೊರಗಡೆ ತಿರುಗಾಡುವಂತಿಲ್ಲ ಮತ್ತು ಇತರರ ಮನೆಗಳಿಗೆ ಹೋಗುವಂತಿಲ್ಲ್ಲ. ಈ ಪ್ರದೇಶದಲ್ಲಿರುವ ಎಲ್ಲಾ ಮನೆಗಳ ಸದಸ್ಯರು ಗೃಹ ಸಂಪರ್ಕ ತಡೆ(ಹೋಂ ಕ್ವೆರೆಂಟೈನ್) ಯಲ್ಲಿರುವುದು, ಇಲ್ಲಿ ವಾಸಿಸುತ್ತಿರುವವರ ಆರೋಗ್ಯದ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಪ್ರತಿನಿತ್ಯ ಪರಿಶೀಲನೆ ನಡೆಸುವುದು, ತೀವ್ರ ನಿಗಾವಹಿಸುವುದು, ಈ ಪ್ರದೇಶದಲ್ಲಿ ಯಾವುದೇ ರೀತಿಯ ಕ್ರೀಡೆ, ಸಭೆ, ಸಮಾರಂಭ, ಮದುವೆ ಮುಂತಾದ ಜನ ಗುಂಪು ಸೇರುವಂತಹ ಎಲ್ಲಾ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ನಿಷೇಧಿಸಿದೆ.
ಕೊಂಡಂಗೇರಿ ಗ್ರಾಮದಲ್ಲಿರುವ 247 ಮನೆಗಳಲ್ಲಿ ಒಟ್ಟು ಜನಸಂಖ್ಯೆ 1054 ಮಂದಿ ವಾಸಿಸುತ್ತಿದ್ದು, ಈ ಗ್ರಾಮ ವ್ಯಾಪ್ತಿಯ ಭೌಗೋಳಿಕ ಪ್ರದೇಶವನ್ನು ಬಫರ್ ಜೋನ್ ಎಂದು ಘೋಷಿಸಿದೆ. ಈ ಪ್ರದೇಶದಲ್ಲಿ ವಾಸಿಸುತ್ತಿರುವವರು ಹೊರ ಪ್ರದೇಶಕ್ಕೆ ಹೋಗುವಂತಿಲ್ಲ ಮತ್ತು ಹೊರಗಿನವರು ಈ ಪ್ರದೇಶಕ್ಕೆ ಆಗಮಿಸುವಂತಿಲ್ಲ. ಈ ಪ್ರದೇಶದಲ್ಲಿ ಯಾವುದೇ ರೀತಿಯ ಕ್ರೀಡೆ, ಸಭೆ, ಸಮಾರಂಭ, ಮದುವೆ ಮುಂತಾದ ಜನ ಗುಂಪು ಸೇರುವಂತಹ ಎಲ್ಲಾ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ನಿಷೇಧಿಸಿದೆ.
ಇಲ್ಲಿ ವಾಸಿಸುತ್ತಿರುವವರ ಆರೋಗ್ಯದ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಿತ್ಯ ಪರಿಶೀಲನೆ ನಡೆಸುವುದು, ತೀವ್ರ ನಿಗಾವಹಿಸುವುದು. ಈ ಆದೇಶದ ಉಲ್ಲಂಘಿಸುವುದು ದಂಡನೀಯವಾಗಿದೆ. ಆದ್ದರಿಂದ ಕಡ್ಡಾಯವಾಗಿ ನಿಯವನ್ನು ಪಾಲಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.