ಬೆಂಗಳೂರು: ಬಿಪಿಎಲ್ ಕಂಪನಿಗೆ ನೀಡಿರುವ ಭೂಮಿಯನ್ನು ಬೇರೆ ಉದ್ದೇಶಕ್ಕೆ ಬಳಸಿಕೊಂಡಿರುವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ವಿಧಾನಸಭೆ ಅಧಿವೇಶನದಲ್ಲಿ ವಿಪಕ್ಷ ಸದಸ್ಯರು ಸರ್ಕಾರವನ್ನು ಒತ್ತಾಯಿಸಿದರು.
ಕರ್ನಾಟಕ ಕೈಗಾರಿಕಾ ಪ್ರದೇಶಾಬಿವೃದ್ಧಿ ಮಂಡಳಿಯಿಂದ ನೆಲಮಂಗಲ ವಿಧಾನಸಭಾ ಕ್ಷೇತ್ರದ ದಾಬಸ್ ಪೇಟೆ 1 ನೇ ಹಂತದ ಕೈಗಾರಿಕಾ ಪ್ರದೇಶದ ನಿವೇಶನ ಸಂಖ್ಯೆ.1 ಮತ್ತು 2-ಪಾರ್ಟ್ ರಲ್ಲಿ ಒಟ್ಟು 149 ಎಕರೆ 5.5 ಗುಂಟೆ ಜಮೀನನ್ನು ಮೆ. ಬಿ.ಪಿ.ಎಲ್ ಲಿ. ಅವರಿಗೆ ಹಂಚಿಕೆ ಮಾಡಲಾಗಿದೆ. ಈ ಕಂಪನಿಗೆ ಸರ್ಕಾರ ನೀಡಿರುವ ಜಾಗವನ್ನು ನೀಡಿದ ಉದ್ದೇಶಕ್ಕೆ ಬಳಸಿಕೊಳ್ಳಲಾರದ ಆರೋಪವಿದ್ದು ಪ್ರಸ್ತುತ ಅದು ನ್ಯಾಯಾಲಯದಲ್ಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.
ಶುಕ್ರವಾರ ವಿಧಾನಸಭೆಯಲ್ಲಿ ನೆಲಮಂಗಲ ಶಾಸಕ ಡಾ. ಕೆ.ಶ್ರೀನಿವಾಸಮೂರ್ತಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿ ಮಾತನಾಡಿ , ಬಿ.ಪಿ.ಎಲ್ ಕಂಪನಿಗೆ ನೀಡಿರುವ ಜಾಗದ ಕ್ರಯಪತ್ರವನ್ನು ರದ್ದು ಮಾಡಲು ಕಾನೂನಿನ ಮೊರೆ ಹೋಗುವುದಾಗಿ ಹೇಳಿದರು.
ಸದರಿ ಕಂಪನಿಯು ಹಂಚಿಕೆ ಪಡೆದಿರುವ ವಿಸ್ತೀರ್ಣದಲ್ಲಿ ಶೇಕಡಾ 5.12 ರಷ್ಟು ಜಮೀನನ್ನು ಕಟ್ಟಡಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ತಿಳಿಸಿದರು.
ಮೆ.ಬಿ.ಪಿ.ಎಲ್ ಲಿ. ಕಂಪನಿಯು ಹಂಚಿಕೆ ಪಡೆದಿರುವ ವಿಸ್ತೀರ್ಣದಲ್ಲಿ ಶೇಕಡಾ 5.12 ರಷ್ಟು ಜಮೀನನ್ನು ಕಟ್ಟಡಕ್ಕಾಗಿ ಬಳಸಿಕೊಂಡಿರುತ್ತದೆ. ಕೆ.ಐ.ಎ.ಡಿ.ಬಿ.ಯು 2006 ನವೆಂಬರ್ 28 ರಂದು ಶುದ್ದ ಕ್ರಯಪತ್ರವನ್ನು ಮಾಡಿಕೊಟ್ಟಿದೆ ಎಂದು ಹೇಳಿದರು.
ಕೆ.ಐ.ಎ.ಡಿ.ಬಿ.ಯಿಂದ ಕ್ರಯಪತ್ರ ಪಡೆದ ನಂತರ ಮೆ. ಬಿ.ಪಿ.ಎಲ್ ಲಿ. ಅವರು ಕೆಲ ಸಂಸ್ಥೆಗಳಿಗೆ ಜಮೀನನ್ನು ಮಾರಾಟ ಮಾಡಿದ್ದು, ಆ ಕಂಪನಿಗಳ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.