ಮೈಸೂರು: ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಮೇರೆಗೆ ಮೈಸೂರು ಪೂರ್ವ ಉಪನೋಂದಾಣಾಧಿಕಾರಿ ಎಂ.ಗಿರೀಶ್‌ಗೆ 4 ವರ್ಷ ಜೈಲುಶಿಕ್ಷೆ ಮತ್ತು 2 ಲಕ್ಷ ರೂ. ದಂಡ ವಿಧಿಸಿ ಕೋರ್ಟ್ ಆದೇಶಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುಮಂಟೇಸ್ವಾಮಿ ಅವರು ನೀಡಿದ ದೂರಿನನ್ವಯ ಅಂದಿನ ಪೊಲೀಸ್ ಅಧೀಕ್ಷಕ ಜಗದೀಶ್ ಪ್ರಸಾದ್ ಅವರು ಉಪನೋಂದಾಣಾಧಿಕಾರಿ ಎಂ.ಗಿರೀಶ್ ವಿರುದ್ಧ ಮೊ.ಸಂ. 04/2014 ರಲ್ಲಿ ಕಲಂ 13(1) (e), 13(2) ಪಿ.ಸಿ.ಕಾಯ್ದೆ 1988 ರೆ/ವಿ 201 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಕರಣದ ತನಿಖೆ ವೇಳೆ ಆರೋಪಿಯು ಗಳಿಸಿದ ಆಸ್ತಿಯ ಪ್ರಮಾಣವು ಶೇ.58.72 ರಷ್ಟು ಅಧಿಕವಾಗಿರುವುದು ತನಿಖೆಯಿಂದ ಕಂಡುಬಂದಿತ್ತು. ಆರೋಪಿಯ ವಿರುದ್ಧ ಅಂತಿಮ ವರದಿ ಜತೆಗೆ 77 ಸಾಕ್ಷಿದಾರರ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅದರಲ್ಲಿ ಆರೋಪಿತರ ವಿರುದ್ಧ ಅಭಿಯೋಜನಾ ಮಂಜೂರಾತಿಯ ಆದೇಶವನ್ನು ಆಗಿನ ಮುದ್ರಾಂಕ ಆಯುಕ್ತರು ಮತ್ತು ನೋಂದಣಿ ಪರಿವೀಕ್ಷಕರಾದ ಮನೋಜ್ ಕುಮಾರ್ ಮೀನಾ ನೀಡಿದ್ದರು.
ಈ ಪ್ರಕರಣದಲ್ಲಿ ಅಭಿಯೋಜಕರು 13 ಜನರ ಸಾಕ್ಷ್ಯವನ್ನು ಪಡೆದಿದ್ದು, ಎಲ್ಲ ಸಾಕ್ಷಿದಾರರು ಲೋಕಾಯುಕ್ತದ ಪರವಾಗಿ ಸಾಕ್ಷಿ ನುಡಿದಿದ್ದಾರೆ, ಇದನ್ನು ಪರಿಗಣಿಸಿದ 3ನೇ ಸತ್ರ ನ್ಯಾಯಾಲಯ ಮತ್ತು ಲೋಕಾಯುಕ್ತ ವಿಶೇಷ ನ್ಯಾಯಾಧೀಶರಾದ ಕೆ.ಭಾಗ್ಯ ಅವರು, ಆರೋಪಿಯನ್ನು ದೋಷಿಯೆಂದು ಪರಿಗಣಿಸಿ ಕಲಂ 13(1) (e), 13(2) ಪಿ.ಸಿ.ಕಾಯ್ದೆ 1988 ಗೆ 4 ವರ್ಷ ಕಾರಾಗೃಹ ವಾಸ ಹಾಗೂ 2,00,000 ರೂಪಾಯಿ ಹಣವನ್ನು ದಂಡ ವಿಧಿಸಿದೆ.
ದಂಡವನ್ನು ಕಟ್ಟಲು ತಪ್ಪಿದಲ್ಲಿ ಸಾದಾ ಶಿಕ್ಷೆ 1 ವರ್ಷ ಕಾರಾಗೃಹ ವಾಸ ಹಾಗೂ ಕಲಂ 201 ಐಪಿಸಿ ಗೆ 2 ವರ್ಷ, 6 ತಿಂಗಳ ಕಾರಾಗೃಹವಾಸ, ದಂಡ 50,000/- ರೂಪಾಯಿ, ತಪ್ಪಿದಲ್ಲಿ ಸಾದಾ ಶಿಕ್ಷೆ 6 ತಿಂಗಳ ಕಾರಾಗೃಹ ವಾಸ ಎಂಬುದಾಗಿ ಈಗಿನ 3ನೇ ಸತ್ರ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದ್ದಾರೆ.
ಪೊಲೀಸ್ ನಿರೀಕ್ಷಕರಾದ ನಟರಾಜು, ಗೋಪಾಲಕೃಷ್ಣ, ಪರಶುರಾಮ್ ಹಾಗೂ ಬಾಲಕೃಷ್ಣ ಅವರು ತನಿಖೆಯ ತಂಡದಲ್ಲಿದ್ದರು. ವಿಶೇಷ ಲೋಕಾಯುಕ್ತ ಅಭಿಯೋಜಕಿ ಕಲಿಯಂಡ ಮುತ್ತಮ್ಮ ಪೂಣಚ್ಚ ವಾದ ಮಂಡಿಸಿದರು.