ಬೆಂಗಳೂರು: ಮಲೈಮಹದೇಶ್ವರ ಬೆಟ್ಟಕ್ಕೆ ವೋಲ್ವೋ ಬಸ್ ಬದಲಾಗಿ ಇತರೆ ಮಾದರಿಯ ಹವನಿಯಂತ್ರಿತ ಬಸ್ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಲಕ್ಷ್ಮಣ ಸಂಗಪ್ಪ ಸವದಿ ತಿಳಿಸಿದರು.
ವಿಧಾನಪರಿಷತ್ತಿನಲ್ಲಿ ನಡೆದ ಪ್ರಶ್ನೋತ್ತರ ವೇಳೆ ಮರೀತಿಬ್ಬೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶ್ರೀ ಮಲೈಮಹದೇಶ್ವರ ಬೆಟ್ಟದ ರಸ್ತೆಯು ತಿರುವುಗಳನ್ನು ಹೊಂದಿರುವ ಕಡಿದಾದ ರಸ್ತೆಯಾಗಿರುವುದರಿಂದ ಸದರಿ ರಸ್ತೆಗಳಲ್ಲಿ ಬೆಂಗಳೂರು ಮತ್ತು ಮೈಸೂರಿನಿಂದ ಹವಾನಿಯಂತ್ರಿತ ವೋಲ್ವೋ (ಐರಾವತ) ಬಸ್ಗಳ ಕಾರ್ಯಾಚರಣೆ ಮಾಡುವುದು ಕಷ್ಟಸಾಧ್ಯವಾಗಿರುವುದರಿಂದ ಕೆ.ಎಸ್.ಆರ್.ಟಿ.ಸಿಯಿಂದ ಹವಾನಿಯಂತ್ರಿತ ವೋಲ್ವೋ ಬಸ್ (ಐರಾವತ) ಬಸ್ಗಳ ಸೌಲಭ್ಯ ಕಲ್ಪಿಸಿಲ್ಲ ಎಂದರು.
ಪ್ರತಿನಿತ್ಯ ಬೆಂಗಳೂರಿನಿಂದ ಮಲೈಮಹದೇಶ್ವರ ಬೆಟ್ಟಕ್ಕೆ 15 ವೇಗದೂತ ಸಾರಿಗೆ ಕಾರ್ಯಾಚರಣೆಯಲ್ಲಿದೆ. ಮೈಸೂರಿನಿಂದ 20 ವೇಗದೂತ ಬಸ್ಗಳು ಕಾರ್ಯಾಚರಣೆಯಲ್ಲಿವೆ. ಮೈಸೂರು, ಬೆಂಗಳೂರು, ಚಾಮರಾಜನಗರ, ರಾಮನಗರ, ಮಂಡ್ಯ, ಕೋಲಾರ, ಶಿವಮೊಗ್ಗ ಮುಂತಾದ ಸ್ಥಳಗಳಿಗೆ ಒಟ್ಟಾರೆ 73 ವೇಗದೂತ ಸಾರಿಗೆಗಳನ್ನು ಪ್ರತಿನಿತ್ಯ ಕಾರ್ಯಚರಣೆ ಮಾಡಲಾಗುತಿದೆ. ಬೆಟ್ಟದಲ್ಲಿ ನಡೆಯುವ ವಿವಿಧ ಜಾತ್ರೆಗಳು, ಅಮಾಸ್ಯೆ, ಹುಣ್ಣಿಮೆ ಮುಂತಾದ ದಿನಗಳಲ್ಲಿ ಜನದಟ್ಟಣೆಗೆ ಅನುಗುಣವಾಗಿ ಹೆಚ್ಚುವರಿ ಸಾರಿಗೆಗಳನ್ನು ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ರಸ್ತೆಗಳನ್ನು ಪರಿಶೀಲಿಸಿ ವೋಲ್ವೋ ಬಸ್ಗಳ ಬದಲಾಗಿ ಬೇರೆ ಮಾದರಿಯ ಹವಾನಿಯಂತ್ರಿತ ಬಸ್ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಸದನದಲ್ಲಿ ತಿಳಿಸಿದರು.