ಬೆಂಗಳೂರು: ಕೊರೊನಾ ವೈರಸ್ ಸಾರ್ವಜನಿಕರಲ್ಲಿ ಹರಡುವುದನ್ನು ತಡೆಗಟ್ಟಲುಬಿಎಂಟಿಸಿ, ಕೆಎಸ್ಆರ್ಟಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಶೇ.50 ಬಸ್ಗಳ ಸೇವೆ ಸ್ಥಗಿತಗೊಳಿಸಲಾಗಿದೆ.
ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಗೆ ಸಂಚರಿಸುವ ವಿವಿಧ ಮಾರ್ಗಗಳ ಬಸ್ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ರದ್ದು ಪಡಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಪಿ. ರಾಜೇಂದ್ರ ಚೋಳನ್ ತಿಳಿಸಿದ್ದಾರೆ.
ಮುಂಬಯಿ, ಕಲಬುರ್ಗಿ, ಮಾರ್ಗದಲ್ಲಿ ಕಾರ್ಯಾಚರಣೆಯಲ್ಲಿರುವ ಎಲ್ಲಾ ಸಾರಿಗೆ, ವಿಜಯಪೂರ ಮಾರ್ಗದ ಮೂಲಕ ಮಾಹಾರಾಷ್ಟ್ರ ರಾಜ್ಯಕ್ಕೆ ಕಾರ್ಯಾಚರಣೆಯಾಗುವ ಎಲ್ಲಾ ಸಾರಿಗೆಗಳನ್ನು, ಕೊಲ್ಹಾಪೂರ, ಪೂಣೆ, ಗೋವಾ ಮಾರ್ಗದಲ್ಲಿ ಕಾರ್ಯಾಚರಣೆಯಲ್ಲಿರುವ ಸುಮಾರು ಶೇ.50 ಸಾರಿಗೆಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಬೆಂಗಳೂರು ಮಾರ್ಗದಲ್ಲಿ ಕಾರ್ಯಾಚರಣೆಯಲ್ಲಿರುವ ಸುಮಾರು 25% ವೇಗದೂತ ಮತ್ತು ಸುಮಾರು 50% ಪ್ರತಿಷ್ಟಿತ ಸಾರಿಗೆಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೊರೊನಾ ವೈರಸ್ ಸಾಂಕ್ರಾಮಿಕವಾಗಿ ಹರಡುತ್ತಿರುವುದರಿಂದ ಸಾರ್ವಜನಿಕ ಪ್ರಯಾಣಿಕರ ದಟ್ಟಣೆ ಕಡಿಮೆಯಾಗಿರುವುದರಿಂದ ಸಂಸ್ಥೆಯ ವ್ಯಾಪ್ತಿಯ 06 ಜಿಲ್ಲೆಗಳ ಒಟ್ಟು 09 ವಿಭಾಗಗಳಿಂದ ಕಾರ್ಯಾಚರಣೆಯಾಗುತ್ತಿರುವ ಸಾರಿಗೆಗಳಲ್ಲಿ ಮಾ. 19 ರಂದು 400 ಅನುಸೂಚಿಗಳನ್ನು ರದ್ದುಗೊಳಿಸಲಾಗಿದೆ. ಇದರಿಂದಾಗಿ ಸಂಸ್ಥೆಗೆ ಅಂದಾಜೂ ಒಂದುಕೋಟಿ ರೂಪಾಯಿ ಆದಾಯದಲ್ಲಿ ನಷ್ಟ ಉಂಟಾಗಿರುತ್ತದೆ.
ಸಂಚಿತವಾಗಿ ಮಾ. 11 ರಿಂದ 19ರ ವರೆಗೆ 2723 ಅನುಸೂಚಿಗಳನ್ನು ರದ್ದುಗೊಳಿಸಲಾಗಿದ್ದು, ಇದರಿಂದಾಗಿ ಸಂಸ್ಥೆಗೆ ಅಂದಾಜೂ ಏಳುಕೋಟಿ ರೂಪಾಯಿ ಆದಾಯದಲ್ಲಿ ನಷ್ಟ ಉಂಟಾಗಿರುತ್ತದೆ. ಪ್ರಸ್ತುತ ಪ್ರಯಾಣಿಕರ ಸಾಂಧ್ರತೆಯನ್ನು ಗಮನದಲ್ಲಿಟ್ಟುಕೊಂಡು ಅವಶ್ಯಕತೆಗನುಸಾರವಾಗಿ ಸಾರಿಗೆ ಕಾರ್ಯಾಚರಣೆಯನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.