ಬೆಂಗಳೂರು: ಚುನಾವಣಾ ಆಯೋಗವು ಆಮ್ ಆದ್ಮಿ ಪಾರ್ಟಿಗೆ ರಾಷ್ಟ್ರೀಯ ಪಕ್ಷದ ಮಾನ್ಯತೆ ಘೋಷಿಸಿರುವುದಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯ ನಾಯಕರು ಹರ್ಷ ವ್ಯಕ್ತಪಡಿಸಿದರು.
ಎಎಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೃಥ್ವಿ ರೆಡ್ಡಿ, “ಜನರ ಬೆಂಬಲ ಹಾಗೂ ದೇವರ ದಯೆಯಿಂದಾಗಿ ಆಮ್ ಆದ್ಮಿ ಪಾರ್ಟಿಯು ಈ ಪ್ರಮಾಣದ ಯಶಸ್ಸಿಗಳಿಸಿ ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆದಿದೆ. ಹತ್ತು ವರ್ಷಗಳ ಹಿಂದೆ ಹಣಬಲ, ತೋಳ್ಬಲ, ರಾಜಕೀಯ ಹಿನ್ನೆಲೆಯಿಲ್ಲದ ವ್ಯಕ್ತಿ ಚುನಾವಣೆಯಲ್ಲಿ ಗೆಲ್ಲುವುದು ಅಸಾಧ್ಯವೆಂದು ಭಾವನೆಯಿತ್ತು. ಅದು ಸುಳ್ಳೆಂದು ಎಎಪಿ ಸಾಬೀತುಪಡಿಸಿದೆ.
ಖಾಸಗಿ ಶಾಲೆಗಳಿಗಿಂತಲೂ ಚೆನ್ನಾಗಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಸಾಧ್ಯವಿದೆ ಎಂಬುದನ್ನೂ ನಾವು ತೋರಿಸಿಕೊಟ್ಟಿದ್ದೇವೆ. ದುಡ್ಡು ಹಂಚದೇ, ದ್ವೇಷ ಹರಡದೇ ಕೂಡ ಗೆಲುವು ಸಾಧಿಸಬಹುದು ಎಂಬುದು ಆಮ್ ಆದ್ಮಿ ಪಾರ್ಟಿಯು ಸಾಬೀತುಪಡಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಬೇರೆ ಪಕ್ಷಗಳು ಕೂಡ ಇಂದು ಸರ್ಕಾರಿ ಶಾಲೆಗಳ ಬಗ್ಗೆ ಮಾತನಾಡುವಂತಾಗಿದೆ. ಇದು ಎಎಪಿಗೆ ದೊರೆತ ದೊಡ್ಡ ಗೆಲುವು” ಎಂದು ಹೇಳಿದರು.
“ರಾಷ್ಟ್ರೀಯ ಪಕ್ಷದ ಮಾನ್ಯತೆ ಅಗತ್ಯವಿರುವ ಎಲ್ಲ ಷರತ್ತುಗಳನ್ನು ಗುಜರಾತ್ ಚುನಾವಣೆಯ ಫಲಿತಾಂಶದಲ್ಲಿಯೇ ಆಮ್ ಆದ್ಮಿ ಪಾರ್ಟಿ ಪೂರೈಸಿದೆ. ಇದಾಗಿ ನಾಲ್ಕೈದು ತಿಂಗಳುಗಳು ಕಳೆದರೂ ಚುನಾವಣಾ ಆಯೋಗವು ಈ ಕುರಿತು ನಿರ್ಧಾರ ತೆಗೆದುಕೊಂಡಿರಲಿಲ್ಲ. ಕರ್ನಾಟಕ ಎಎಪಿ ಕಾನೂನು ಘಟಕವು ವಕೀಲರು ಹಾಗೂ ಪಕ್ಷದ ಮುಖಂಡರಾದ ಕೆ.ದಿವಾಕರ್ ಮತ್ತು ಬ್ರಿಜೇಶ್ ಕಾಳಪ್ಪ ನೇತೃತ್ವದಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಏಪ್ರಿಲ್ 14ರೊಳಗೆ ಮಾನ್ಯತೆ ನೀಡಬೇಕೆಂದು ಹೈಕೋರ್ಟ್ ಹೇಳಿತ್ತು. ಕೇಂದ್ರ ಬಿಜೆಪಿ ಸರ್ಕಾರದ ಕುತಂತ್ರದಿಂದಾಗಿ ಸಿಗದಿದ್ದ ಮಾನ್ಯತೆಯು ಈಗ ಹೈಕೋರ್ಟ್ ಆದೇಶದಿಂದ ದೊರೆತಿದೆ. ಈ ಮಾನ್ಯತೆ ಪಡೆದಿರುವ ದೇಶ ಆರು ಪಕ್ಷಗಳಲ್ಲಿ ಎಎಪಿ ಕೂಡ ಒಂದು. ಆಮ್ ಆದ್ಮಿ ಪಾರ್ಟಿಯ ಈ ಗೆಲುವು ಜನಸಾಮಾನ್ಯರ ಗೆಲುವು. ಕೋಟ್ಯಂತರ ಜನರ ಬೆಂಬಲ ಹಾಗೂ ಲಕ್ಷಾಂತರ ಕಾರ್ಯಕರ್ತರ ಶ್ರಮದಿಂದಾಗಿ ಆಮ್ ಆದ್ಮಿ ಪಾರ್ಟಿ ಹೆಮ್ಮರವಾಗಿ ಬೆಳೆದಿದೆ” ಎಂದು ಪೃಥ್ವಿ ರೆಡ್ಡಿ ಹೇಳಿದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಮಾತನಾಡಿ, “ರಾಷ್ಟ್ರೀಯ ಪಕ್ಷದ ಮಾನ್ಯತೆಗೆ ಅರ್ಹವಾಗಲು ಅನೇಕ ಪಕ್ಷಗಳ ಅನೇಕ ದಶಕಗಳನ್ನು ತೆಗೆದುಕೊಂಡಿವೆ. ಆದರೆ ಅರವಿಂದ್ ಕೇಜ್ರಿವಾಲ್‌ರವರು ಜನಪರ ಹಾಗೂ ಪ್ರಾಮಾಣಿಕ ಆಡಳಿತದಿಂದಾಗಿ ಆಮ್ ಆದ್ಮಿ ಪಾರ್ಟಿಯು ಕೇವಲ ಹತ್ತು ವರ್ಷಗಳಲ್ಲಿ ಈ ಗುರಿ ಸಾಧಿಸಿದೆ. ಈ ಬೆಳವಣಿಗೆಯಿಂದಾಗಿ ನ್ಯಾಯಾಂಗದ ಮೇಲೆ ನಮಗಿದ್ದ ವಿಶ್ವಾಸ, ನಂಬಿಕೆ ಹೆಚ್ಚಾಗಿದೆ. ಸತ್ಯಕ್ಕೆ ಸಾವಿಲ್ಲ ಎಂಬುದು ಸಾಬೀತಾಗಿದೆ” ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್ ಕಾಳಪ್ಪ, ಮಾಧ್ಯಮ ವಕ್ತಾರೆ ಉಷಾ ಮೋಹನ್ ಮತ್ತಿತರರು ಭಾಗವಹಿಸಿದ್ದರು.