ಬೆಳಗಾವಿ: ಅಥಣಿ ಕ್ಷೇತ್ರದ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಪಕ್ಷದ ಹೈಕಮಾಂಡ್ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಅಸಮಾಧಾನಗೊಂಡಿರುವ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ನಾಳೆ ಬಿಜೆಪಿಗೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಲಕ್ಷ್ಮಣ್ ಸವದಿ, ಸಂಜೆ 4 ಗಂಟೆಗೆ ಕಾರ್ಯಕರ್ತರ ಸಭೆ ಇದೆ. ಕಾರ್ಯಕರ್ತರ ಅಭಿಪ್ರಾಯ ಪಡೆಯುತ್ತೇನೆ. ನಾಳೆ ಎಂಎಲ್ ಸಿ ಸ್ಥಾನಕ್ಕೆ ಮತ್ತು ಬಿಜೆಪಿಗೆ ರಾಜೀನಾಮೆ ನೀಡುತ್ತೇನೆ ಎಂದರು.
ಸಿಎಂ ಬೊಮ್ಮಾಯಿ ಗಟ್ಟಿಯಾಗಿ ನನ್ನ ಪರ ನಿಂತಿದ್ರೆ ಟಿಕೆಟ್ ಸಿಗುತಿತ್ತು ನನ್ನನ್ನ ಡಿಸಿಎಂ ಮಾಡಿ ಅರ್ಧಕ್ಕೆ ತೆಗೆದರು ಏನು ಅಪರಾಧ ಮಾಡಿದೆ ಅಂತಾ ಸ್ಥಾನ ಕಿತ್ತುಕೊಂಡರು. ಬೊಮ್ಮಾಯಿ ನನ್ನ ಪರ ಗಟ್ಟಿಯಾಗಿ ನಿಲ್ಲಿಲ್ಲ. ಸಿಎಂ ಬೊಮ್ಮಾಯಿ ಒತ್ತಡ ಹೇರಿದ್ರೆ ಟಿಕೆಟ್ ಸಿಗುತ್ತಿತ್ತು. ಅಣ್ಣಾ ಸಾಹೇಬ್ ಸ್ನೇಹಿತರಾಗಿ ಭೇಟಿ ನೀಡಿದ್ದರು. ಈಗ ಸಂದಾಯ ಸಮಯ ಮುಗಿದಿದೆ . ಕ್ಷೇತ್ರದ ಜನರೇ ನನ್ನ ಹೈಕಮಾಂಡ್ ಎಂದು ಲಕ್ಷ್ಮಣ್ ಸವದಿ ಹೇಳಿದರು.
ಇನ್ನು ನನ್ನನ್ನು ಯಾಕೆ ಡಿಸಿಎಂ ಸ್ಥಾನದಿಂದ ತೆಗದ್ರಿ ಎಂದು ಪ್ರಶ್ನಿಸಿದ ಅವರು, ಏನ್ ತಪ್ಪು ಮಾಡಿದ್ದೆ, ಯಾರನ್ನಾದರೂ ರೇಪ್ ಮಾಡಿದ್ನಾ? ಯಾವ ಅಪರಾಧದ ಮೇಲೆ ತೆಗೆದು ಹಾಕಿದ್ರಿ ಎಂದು ಸಿಎಂ ವಿರುದ್ಧ ಕಿಡಿಕಾಡಿದರು.
ನೀವು ಸೋತರು ಪಕ್ಷ ಡಿಸಿಎಂ ಮಾಡಿತ್ತು ಆದರೂ ಪಕ್ಷ ಬಿಡ್ತಿದ್ದಾರೆ ಎಂದು ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಪ್ರಶ್ನಿಸಿದ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಡಿಸಿಎಂ ಸ್ಥಾನ ಕೊಡಬೇಕೆಂದು ನಾನು ಕೇಳಿದ್ನಾ? ನನಗೆ ಕೊಟ್ಟ ಮೇಲೆ ಕೆಲಸ ಮಾಡಿದೆ ಎಂದರು.
ಇನ್ನು ಮೊದಲು ಪಕ್ಷದ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಬಿಜೆಪಿ ಬಿಡುವ ನನ್ನ ನಿರ್ಧಾರ ಅಚಲ. ಅದನ್ನು ಪ್ರಕಟ ಮಾಡುವ ಪೂರ್ವದಲ್ಲಿ ಏನು ಹೇಳಲ್ಲ. ಪಕ್ಷದಿಂದ ಹೊರಗೆ ಬಂದು ತೀರ್ಮಾನ ಮಾಡುವೆ. ಅಥಣಿ ಹೈಕಮಾಂಡ್ ತೀರ್ಮಾನದ ಬಳಿಕ ಎಲ್ಲವೂ ಗೊತ್ತಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಸಿಎಂ ಬೊಮ್ಮಾಯಿ ಅವರಿಂದ ಟಿಕೆಟ್ ಕೈತಪ್ಪಿತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬೊಮ್ಮಾಯಿ ಅವರು ಹಳೆ ಸ್ನೇಹಿತರು. ಅವರೊಂದು ಪಕ್ಷ, ನಾನೊಂದು ಪಕ್ಷದಲ್ಲಿ ಇದ್ದೆವು. ಅವರ ವಿಚಾರಧಾರೆ ಬೇರೆ ನನ್ನ ವಿಚಾರಧಾರೆ ಬೇರೆ ಆಗಿತ್ತು. ಆನಂತರ ಒಂದೇ ಪಕ್ಷದಲ್ಲಿ ಒಟ್ಟಾಗಿ, ನಾನು ಅವರು ಸಚಿವರಾಗಿ ಕೂಡಿ ಕೆಲಸ ಮಾಡಿದ್ದೇವೆ. ಅನೇಕ ಮುಖಂಡರು ನನ್ನ ನಿರ್ಲಕ್ಷ್ಯ ಮಾಡಿದ್ದಕ್ಕೆ ಬೇಸರವಾಗಿದೆ ಎಂದು ಹೇಳಿದರು.