ಬೆಂಗಳೂರು: ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ವೈಎಸ್ವಿ ದತ್ತಾ ಅವರು, ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆ ಮತ್ತೆ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.
ಜೆಡಿಎಸ್ ನಿಂದಲೇ ಕಡೂರು ಕ್ಷೇತ್ರದಲ್ಲಿ ವೈಎಸ್ವಿ ದತ್ತಾ ಅವರು ಸ್ಪರ್ಧಿಸಲಿದ್ದಾರೆ. ಈ ಕುರಿತು ಮಾಜಿ ಸಚಿವ ಎಚ್.ಡಿ ರೇವಣ್ಣ ಘೋಷಣೆ ಮಾಡಿದ್ದಾರೆ. ಇಂದು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಯಗಟಿ ಗ್ರಾಮದಲ್ಲಿನ ದತ್ತಾ ಅವರ ನಿವಾಸಕ್ಕೆ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಭೇಟಿ ನೀಡಿ ಸಭೆ ನಡೆಸಿದರು.
ಸಭೆಯಲ್ಲಿ ವೈಎಸ್ವಿ ದತ್ತಾ ಮತ್ತೆ ಜೆಡಿಎಸ್ ಸೇರ್ಪಡೆಯಾಗಿದ್ದು ಜೆಡಿಎಸ್ ಅಭ್ಯರ್ಥಿಯಾಗಿ ದತ್ತಾ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ರೇವಣ್ಣ ಘೋಷಣೆ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ದತ್ತಾ, ಎಚ್.ಡಿ. ದೇವೇಗೌಡರು ಪಕ್ಷೇತರವಾಗಿ ಸ್ಪರ್ಧಿಸುವುದು ಬೇಡ ಎಂದಿದ್ದಾರೆ. ಹಾಗಾಗಿ ದೇವೇಗೌಡರ ಮಾತಿಗೆ ಬೆಲೆ ಕೊಡುತ್ತೇನೆ ಎಂದಿದ್ದಾರೆ. ಈ ಮೂಲಕ ಕಡೂರು ಕ್ಷೇತ್ರದ ಜೆಡಿಎಸ್ ಟಿಕೆಟ್ ವೈಎಸ್ವಿ ದತ್ತಾರಿಗೆ ಫಿಕ್ಸ್ ಆಗಿದೆ.
ದತ್ತ ಅವರು ಇದೇ ಏ.18ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಆಗ ಎಷ್ಟೇ ಕಷ್ಟ ಆದರೂ ಸರಿ ನಾನು ಬಂದೇ ಬರುತ್ತೇನೆ ಎಂದು ಎಚ್.ಡಿ.ದೇವೇಗೌಡರು ತಿಳಿಸಿದ್ದಾರೆ ಎಂದು ರೇವಣ್ಣ ಹೇಳಿದರು.
ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದ ದತ್ತ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಜೆಡಿಎಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷ ಟಿಕೆಟ್ ನೀಡಲಿಲ್ಲ. ಹೀಗಾಗಿ ಬೇಸರಗೊಂಡು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಆದರೆ ಕಾಂಗ್ರೆಸ್ನಲ್ಲೂ ಅವರಿಗೆ ಟಿಕೆಟ್ ಸಿಗಲಿಲ್ಲ. ಈ ವೇಳೆ ಬೇಸರ ವ್ಯಕ್ತಪಡಿಸಿದ ದತ್ತ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಈಗ ಮತ್ತೆ ಕಾಂಗ್ರೆಸ್ ಬಿಟ್ಟು ಜೆಡಿಎಸ್ಗೆ ಮರಳಿದ್ದಾರೆ.
ಕಡೂರು ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್ನಿಂದ ಧನಂಜಯ್ ಅವರನ್ನು ಅಧಿಕೃತಗೊಳಿಸಲಾಗಿತ್ತು. ಆದರೆ ಈಗ ಧನಂಜಯ್ ಅವರಿಗೆ ಕೊಕ್ ನೀಡಲಾಗಿದೆ. ದತ್ತ ಅವರಿಗೆ ಟಿಕೆಟ್ ಎಂದು ಘೋಷಿಸಿದ್ದಾರೆ.