ಹಾಸನ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಎನ್.ಆರ್. ಸಂತೋಷ್ಗೆ ಅರಸೀಕೆರೆ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಸಂತೋಷ್ ಅವರ ಬೆಂಬಲಿಗರು ಬಿಜೆಪಿ ಬಾವುಟಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡ ಸಂತೋಷ್, ಬೆಂಬಲಿಗರ ಸಭೆಯಲ್ಲಿ ಕಣ್ಣೀರಿಟ್ಟಿದ್ದಾರೆ. ಇನ್ನೊಂದೆಡೆ ಸಂತೋಷ್ ಅವರ ಮನೆ ಮುಂದೆ ಅಭಿಮಾನಿಗಳು ಹೈಡ್ರಾಮಾವನ್ನೇ ಸೃಷ್ಟಿಸಿ ಬಿಜೆಪಿ ಬಾವುಟಕ್ಕೆ ಬೆಂಕಿ ಹಚ್ಚಿ, ಬಿಜೆಪಿ ಚುನಾವಣಾ ಪ್ರಚಾರಕ್ಮೆ ರೆಡಿಯಾಗಿದ್ದ ವಾಹನದ ಮೇಲಿನ ಬಿಜೆಪಿ ಕಮಲ ಚಿಹ್ನೆ ಹರಿದು ಹಾಕಿ ಆಕ್ರೋಶ ಹೊರ ಹಾಕಿದರು.
ಇಡೀ ಅರಸೀಕೆರೆ ಕ್ಷೇತ್ರದಲ್ಲಿ ಬಿಜೆಪಿಯನ್ನು ಹಾಳು ಮಾಡಿದ್ದಾರೆ. ನಾನು ಎನ್.ಆರ್. ಸಂತೋಷ್ ಗೆಲ್ಲಲಿ ಎಂದು ಗಡ್ಡ ಬಿಟ್ಟಿದ್ದೆ. ಈಗ ಅವರಿಗೆ ಟಿಕೆಟ್ ನೀಡಿಲ್ಲ. ನಾಳೆ ಬಿಜೆಪಿ ಸೋಲಲಿ ಎಂದು ಗಡ್ಡ ಬೋಳಿಸಿ ಬೆಂಗಳೂರಿನ ಬಿಜೆಪಿ ಕಚೇರಿಗೆ ಕಳುಹಿಸಿತ್ತೇನೆ ಎಂದು ಸಂತೋಷ್ ಬೆಂಬಲಿಗ ರಂಗನಾಥ್ ಕಿಡಿಕಾರಿದ್ದಾರೆ.
ಇನ್ನು ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಸಂತೋಷ್, ಬೆಂಬಲಿಗರ ಅಭಿಪ್ರಾಯದಂತೆ ಬಿಜೆಪಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ತೀರ್ಮಾನಿಸಿದ್ದು, ಸೋಮವಾರ ಐವತ್ತು ಸಾವಿರ ಜನರರೊಂದಿಗೆ ಹೋಗಿ ನಾಮಪತ್ರ ಸಲ್ಲಿಸುವುದಾಗಿ ಘೋಷಣೆ ಮಾಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ಅರಸೀಕೆರೆಯಲ್ಲಿ ಪಕ್ಷ ಸಂಘಟನೆ ಮಾಡಿದ್ದೆ. ಕಡೆ ಗಳಿಗೆಯಲ್ಲಿ ನನಗೆ ಟಿಕೆಟ್ ಕೈ ತಪ್ಪಿದೆ. ಯಾಕೆ ಟಿಕೆಟ್ ತಪ್ಪಿದೆ ಎಂದು ಗೊತ್ತಿಲ್ಲ. ಆದರೆ ಚುನಾವಣೆ ಕಣದಿಂದ ಸರಿಯಲ್ಲ. ನಾಮಪತ್ರ ಸಲ್ಲಿಸುತ್ತೇನೆ. ಆನಂತರ ಬೇರೆ ಪಕ್ಷದಿಂದ ಸ್ಪರ್ಧಿಸುವುದು ಅಥವಾ ಪಕ್ಷೇತರನಾಗಿ ಸ್ಪರ್ಧಿಸಬೇಕೆಂಬುದನ್ನು ತಿಳಿಸಬಯಸುತ್ತೇನೆ ಎಂದರು.