ಕೊಪ್ಪಳ: ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸಮೀಪದಲ್ಲೇ ಬಿಜೆಪಿಯಲ್ಲಿ ಬಂಡಾಯದ ಬಿಸಿ ಏರುತ್ತಿದ್ದು, ಪಕ್ಷದಲ್ಲಿ ಮತ್ತೊಂದು ವಿಕೆಟ್ ಪತನಗೊಂಡಿದೆ.
ಹಾಲಿ ಸಂಸದ ಕರಡಿ ಸಂಗಣ್ಣ ಟಿಕೆಟ್ ವಂಚಿತವಾಗಿರುವ ಹಿನ್ನೆಲೆಯಲ್ಲಿ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಕೊಪ್ಪಳ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು ಟಿಕೆಟ್ ಸಿಗದೇ ತೀವ್ರ ಅಸಮಧಾನಗೊಂಡಿದ್ದರು. ಇದೀಗ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಗೆ ಮುಂದಾಗಿದ್ದಾರೆ.
ಸಂಸದರಿಗೆ ಟಿಕೆಟ್ ಇಲ್ಲ ಎಂದು ಹೇಳಿದ್ದ ಬಿಜೆಪಿ ವರಿಷ್ಠರ ಬಳಿ ತಮ್ಮ ಪುತ್ರ ಗವಿಸಿದ್ದಪ್ಪ ಕರಡಿ ಅವರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು.
ಆದರೆ ಪುತ್ರನಿಗೂ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಸಂಗಣ್ಣ ಭಾನುವಾರ ಬೆಳಗ್ಗೆ 11 ಗಂಟೆಗೆ ಬೆಂಬಲಿಗರ ಸಭೆ ಕರೆದಿದ್ದು, ಸಭೆ ಬಳಿಕ ಮುಂದಿನ ನಿರ್ಧಾರವನ್ನು ಅಧಿಕೃತವಾಗಿ ತಿಳಿಸಲಿದ್ದಾರೆ.
ಅಲ್ಲದೆ ಆ ಬಳಿಕ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಲಿರುವ ಸಂಗಣ್ಣ, ಸೋಮವಾರ ಲೋಕಸಭಾ ಸ್ಪೀಕರ್ಗೆ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ. ಏ.19 ರಂದು ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ.