ಬೆಂಗಳೂರು: ನಿವೃತ್ತಿ ಆಗುವುದರೊಳಗೆ ಬೆಂಗಳೂರಿನಲ್ಲಿ ಒಂದು ಸೈಟ್ ತಗೋಬೇಕು, ಆ ಸೈಟ್‌ನಲ್ಲಿ ಮನೆ ಕಟ್ಬೇಕು ಅಂತಾ ಅದೆಷ್ಟೋ ಜನ ಕನಸು ಕಂಡಿರ್ತಾರೆ. ಹಾಗೆಯೇ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ನೌಕರರು ಸಹ ಬ್ಯಾಂಕ್‌ನಲ್ಲಿ ಸಾಲ ಮಾಡಿ ಸೈಟ್ ತಗೊಂಡಿದ್ದಾರೆ. ಆದರೆ ಈಗ ಆ ನೌಕರರಿಗೆ ಸೈಟ್ ಕೊಟ್ಟಿರುವ ಸೊಸೈಟಿ ಮುಖಂಡರೇ ನಕಲಿ ದಾಖಲೆ ಸೃಷ್ಟಿಸಿ ವಂಚನೆ ಮಾಡಿ ಕೋಟ್ಯಂತರ ರೂ.ಗಳನ್ನು ನುಂಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸಾರಿಗೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ಹೆಸರಿನಲ್ಲಿ ಸೈಟ್‌ಗಳನ್ನು ಕೊಡಿಸುವುದಾಗಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಯ ಅಧಿಕಾರಿಗಳು ಸೇರಿದಂತೆ ನೌಕರರಿಗೆ ನಿವೇಶನದ ಆಸೆ ಹುಟ್ಟಿಸಿ ಅವರಿಂದ ಲಕ್ಷ ಲಕ್ಷ ರೂ.ಗಳನ್ನು ಪಡೆದು ಗ್ರೀನ್‌ಲ್ಯಾಂಡ್ ಅಂದರೆ ಕೃಷಿ ಭೂಮಿ ತೋರಿಸಿ ಅಧಿಕಾರಿಗಳನ್ನು ತಮ್ಮ ಜತೆ ಸೇರಿಸಿಕೊಂಡು ಸುಮಾರು 58 ಸಾರಿಗೆ ನೌಕರರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ ಎಂದು ಕನ್ನಡ ಪರ ಸಂಘಟನೆಯ ಪದಾಧಿಕಾರಿ ಜೈಕುಮಾರ್ ಎಂಬುವರು ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಈ ದೂರಿನ ಸಂಬಂಧ ಈಗಾಗಲೇ ಸಾರಿಗೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಜೆ.ಮೇಟಿ, ಉಪಾಧ್ಯಕ್ಷ ಚುಂಚಯ್ಯ, ಬಸವಯ್ಯ ನಂದಿಕೋಲ ಹಾಗೂ ಭೂ ಮಾಲೀಕ ಪಿ.ಸಿ. ರಾಜೇಶ್ ಎಂಬುವರನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ನಿಜವಾಗಲೂ ಅವರಾರನ್ನು ಪೊಲೀಸರು ಬಂಧಿಸಿಯೇ ಇಲ್ಲ.
ಘಟನೆ ವಿವರ: ಸಾರಿಗೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ಹೆಸರಿನಲ್ಲಿ ಬೆಂಗಳೂರಿನ ದಕ್ಷಣ ತಾಲೂಕಿನ ನರಸೀಪುರ ಗ್ರಾಮದಲ್ಲಿ ಪಿ.ಸಿ. ರಾಜೇಶ್ ಎಂಬುವರ 6 ಎಕರೆ ಕೃಷಿ ಭೂಮಿಯನ್ನು ತೋರಿಸಿ ಅದರ ಜತೆಗೆ ಸರ್ಕಾರದ ಗೋ ಮಾಳ 2 ಎಕರೆಯನ್ನೂ ತೋರಿಸಿ ಆ ಜಮೀನನ್ನು ಗ್ರಾಮ ಪಂಚಾಯಿತಿಯಲ್ಲಿ ನೋಂದಣಿ ಮಾಡಿಸಿ ಸೈಟ್‌ಗಳಾಗಿ ಪರಿವರ್ತನೆ ಮಾಡಲಾಗಿದೆ ಎಂದು ಗುರುತುಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಆ ಬಳಿಕ ಸಾರಿಗೆ ಅಧಿಕಾರಿಗಳು ಸೇರಿದಂತೆ 58 ನೌಕರರಿಗೆ ಹಂಚಿಕೆ ಮಾಡಿದ್ದಾರೆ. ಒಟ್ಟು 8 ಎಕರೆ ಜಮೀನು ಇದೆ ಎಂದು ನೌಕರರನ್ನು ವಂಚಿಸಿ ಈ ಜಾಗದಲ್ಲಿ ಇಲ್ಲಿ ಈಜುಕೊಳ (swimming pool), ಆಟವಾಡುವುದಕ್ಕೆ ಆಟದ ಮೈದಾನ ಎಲ್ಲ ಸಿಗುತ್ತದೆ ಎಂದು ನಂಬಿಸಿದ್ದಾರೆ.
ಇವರಲ್ಲಿ ಪ್ರಮುಖವಾಗಿ ಸಂಘದ ಅಧ್ಯಕ್ಷ ಎಸ್.ಜೆ. ಮೇಟಿ ಎಂಬುವವನೇ ನೌಕರರನ್ನು ನಂಬಿಸಿ ಹಣ ವಸೂಲಿ ಮಾಡಿದ್ದಾನೆ. ಅಲ್ಲದೆ ಬ್ಯಾಂಕ್‌ಗಳಿಂದ ಲೋನ್‌ತೆಗೆದುಕೊಂಡು ನೌಕರರು ಸೈಟ್ ಖರೀದಿಸಲು ಪ್ಲಾನ್ ಮಾಡಿ ಬ್ಯಾಂಕ್‌ಗಳಿಂದ ಲೋನ್ ಕೂಡ ಈತನೇ ನಿಂತು ಮಾಡಿಸಿಕೊಂಡು ನೌಕರರಿಂದ ಸೈಟ್‌ನ ಪೂರ್ತಿ ಹಣವನ್ನು ಕಟ್ಟಿಸಿಕೊಂಡು ನಕಲಿ ದಾಖಲೆ ನೀಡಿ ಕೈ ತೊಳೆದುಕೊಂಡಿದ್ದಾನೆ. ಈತನಿಗೆ ಭೂ ಮಾಲೀಕ ರಾಜೇಶ್, ತಮ್ಮ ಸಹೋದ್ಯೋಗಿಗಳಾದ ಬಸವಯ್ಯ ನಂದಿಕೋಲ, ಚುಂಚಯ್ಯ ಜತೆಗೆ ಅಧಿಕಾರಿಗಳು ಸಾಥ್ ನೀಡಿದ್ದು ನೌಕರರನ್ನು ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಸಂಬಂಧ ಕನ್ನಡಪರ ಹೋರಾಟಗಾರ ಜೈಕುಮಾರ್ ಎಂಬುವರು ಒಂದೂವರೆ ತಿಂಗಳ ಹಿಂದೆಯೇ ದೂರು ನೀಡಿದ್ದು, ಆ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು ಅದು ಈವರೆಗೂ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುವುದು ತಿಳಿದು ಬಂದಿಲ್ಲ. ಇತ್ತ ಒಂದೂವರೆ ತಿಂಗಳ ಹಿಂದೆಯೇ ದೂರು ದಾಖಲಾಗಿದ್ದರೂ ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳು ಈ ಎಸ್.ಜೆ. ಮೇಟಿ, ಬಸವಯ್ಯ ನಂದಿಕೋಲ, ಚುಂಚಯ್ಯ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದು ಹಲವಾರು ಅನುಮಾನಕ್ಕೂ ಎಡೆ ಮಾಡಿಕೊಟ್ಟಿದೆ.
ಇನ್ನು ಸಾರಿಗೆ ನಿಗಮದಲ್ಲಿ ಒಬ್ಬ ಚಾಲಕ ಅಥವಾ ನಿರ್ವಾಹಕರ ಬಗ್ಗೆ ಒಂದು ಸಣ್ಣ ಆರೋಪ ಕೇಳಿ ಬಂದರೂ ಆಮಾನತು ಮಾಡುವ ಅಧಿಕಾರಿಗಳು ಈ ಮೂವರ ವಿರುದ್ಧ ಈವರೆಗೂ ಯಾವುದೇ ಕ್ರಮ ಜರುಗಿಸದೆ ಏಕೆ ಮೌನವಾಗಿದ್ದಾರೆ ಎಂಬುದಕ್ಕೆ ಉತ್ತರ ನೀಡಬೇಕು ಎಂದು ನೌಕರರು ಪ್ರಶ್ನಿಸುತ್ತಿದ್ದಾರೆ.
ಇನ್ನು ಸಂಘದ ಅಧ್ಯಕ್ಷ ಎಸ್.ಜೆ. ಮೇಟಿ ಸೇರಿಂದತೆ ಈ ಮೂವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಸಾರಿಗೆ ಅಧಿಕಾರಿಗಳನ್ನು ಮತ್ತು ಪೊಲೀಸ್ ಅಧಿಕಾರಿಗಳಲ್ಲಿ ವಂಚನೆಗೆ ಒಳಗಾದ ನೌಕರರು ಮನವಿ ಮಾಡಿದ್ದಾರೆ. ಅಲ್ಲದೆ ಈ ಎಸ್.ಜೆ. ಮೇಟಿ ಎಂಬಾತ ಸೊಸೈಟಿ ಸದಸ್ಯರಿಗೆ ಹೊಸ ಮೊಬೈಲ್ ಕೊಡಿಸುವುದು ಸೇರಿದಂತೆ ಹಲವಾರು ಅಕ್ರಮಗಳನ್ನು ಎಸಗಿದ್ದು ಅವುಗಳನ್ನೂ ಬಯಲಿಗೆಳೆಯಬೇಕು ಎಂದು ಒತ್ತಾಯಿಸಿದ್ದಾರೆ.
ಬೋಗಸ್ ದಾಖಲೇ ಸೃಷ್ಟಿಸಿ 30×40 ಸೈಟ್‌ಗಳನ್ನು ಹಂಚಿಕೆ ಮಾಡಿದ್ದಾರೆ. ಇದರಿಂದ ಆಭರಣ ಗಿರವಿ ಇಟ್ಟು, ಸಾಲಸೋಲ ಮಾಡಿ ನಿವೇಶನ ಖರೀದಿಸಿದ್ದಾರೆ. ಈ ರೀತಿ ಖರೀದಿಸಿದವರಲ್ಲಿ ಈಗಾಗಲೆ 58 ಜನ ಮೋಸ ಹೋಗಿದ್ದಾರೆ. ಅವರಿಗೆ ನ್ಯಾಯ ಸಿಗುವವರೆಗೂ ನನ್ನ ಹೋರಾಟ ನಿಲ್ಲಿಸುವುದಿಲ್ಲ.
l ಜೈಕುಮಾರ್, ಕನ್ನಡ ಪರ ಸಂಘಟನೆಯ ಮುಖಂಡ
ನಾನು ಯಾವುದೇ ತಪ್ಪು ಮಾಡಿಲ್ಲ ಆದ್ದರಿಂದ ನನ್ನನ್ನು ಪೊಲೀಸರು ಬಂಧಿಸಿಲ್ಲ. ಆರೋಪ ಮಾಡುವವರು ಸಾವಿರ ಆರೋಪ ಮಾಡುತ್ತಾರೆ ಅದಕ್ಕೆಲ್ಲ ನಾನು ಉತ್ತರ ಕೊಡಬೇಕಾ. ಯಾವುದೇ ಕೇಸು ದಾಖಲಾಗಿಲ್ಲ. ನಾನು ವಂಚನೆ ಮಾಡಿರುವ ದಾಖಲೆ ಇದ್ದರೆ ತಂದು ಕೊಡಲಿ. ಅವರಿಗೆ ಹೇಗೆ ಉತ್ತರ ನೀಡಬೇಕೋ ಆ ರೀತಿ ಉತ್ತರ ಕೊಡುತ್ತೇವೆ.
l ವಂಚನೆ ಆರೋಪಿ ಎಸ್.ಜೆ.ಮೇಟಿ ಅಧ್ಯಕ್ಷ ಸಾರಿಗೆ ನೌಕರರ ಕ್ಷೇಮಾಭಿವೃದ್ಧಿ ಸಂಘ
ನಾವು ಯಾವುದೇ ವಂಚನೆ ಮಾಡಿಲ್ಲ. ಆರೋಪ ಬಂದಿರುವುದು ನಿಜ. ಆದರೆ, ನಮ್ಮಿಂದ ಸೈಟ್ ಖರೀದಿಸಿರುವವರು ಯಾರು ಕೂಡ ದೂರು ನೀಡಿಲ್ಲ, ಯಾವುದೋ ಕನ್ನಡಪರ ಸಂಘಟನೆಯ ವ್ಯಕ್ತಿ ಜೈಕುಮಾರ್ ಎಂಬಾತ ದೂರು ನೀಡಿದ್ದು ಇದು ಸತ್ಯಕ್ಕೆ ದೂರವಾದುದಾಗಿದೆ.
l ಚುಂಚಯ್ಯ, ಉಪಾಧ್ಯಕ್ಷ ಸಾರಿಗೆ ನೌಕರರ ಕ್ಷೇಮಾಭಿವೃದ್ಧಿ ಸಂಘ