ಮಂಡ್ಯ: ಇತ್ತೀಚೆಗಷ್ಟೇ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದ ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಇದೀಗ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮದ್ದೂರಿನಲ್ಲಿ ಮಾತನಾಡಿದ ಅವರು, ವರಿಷ್ಠರು ಸೂಚಿಸಿದರೆ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ. ಮಂಡ್ಯ ಕ್ಷೇತ್ರದಲ್ಲಿ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ವದಂತಿ ಇದೆ. ಪಕ್ಷ ಸೂಚನೆ ನೀಡಿದರೆ ನನ್ನ ಸ್ಪರ್ಧೆ ಇರಲಿದೆ ಎಂದರು.
ಇನ್ನು ಈವರೆಗೆ ಪಕ್ಷ ನನಗೆ ಯಾವುದೇ ಸೂಚನೆ ನೀಡಿಲ್ಲ. ಮಂಡ್ಯ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಮರ್ಥರಿದ್ದಾರೆ. ಈ ನಡುವೆಯೂ ನನಗೆ ಸ್ಪರ್ಧಿಸುವಂತೆ ಸೂಚನೆ ನೀಡಿದರೆ ಖಂಡಿತ ನಿಲ್ಲುತ್ತೇನೆ ಎಂದು ಹೇಳಿದರು.
ಜಿಲ್ಲೆಯ ಜನರು ಬದಲಾವಣೆ ಬಯಸುತ್ತಿದ್ದಾರೆ. ಹೀಗಾಗಿ ಈ ಬಾರಿ ಜಿಲ್ಲೆಯಲ್ಲಿ ಅಚ್ಚರಿಯ ಫಲಿತಾಂಶ ಬರುತ್ತದೆ. ಮದ್ದೂರಿನಲ್ಲಿ ದಿ.ಅಂಬರೀಶ್ ಅಭಿಮಾನಿಗಳು ಹೆಚ್ಚು ಇದ್ದಾರೆ. ಅಂಬರೀಶ್ ಅಭಿಮಾನಿಗಳಿರುವುದರಿಂದ ಬಿಜೆಪಿಗೆ ಪ್ಲಸ್ ಆಗುತ್ತೆ ಎಂದರು.
ಇನ್ನು ಮುಂದಿನ ದಿನಗಳಲ್ಲಿ ಬಿಜೆಪಿ ಪರ ನನ್ನ ಮಗ ಅಭಿಷೇಕ್ ಕೂಡ ಪ್ರಚಾರ ಮಾಡುತ್ತಾರೆ. ಈ ಮೂಲಕ ಅಂಬರೀಶ್ ಅಭಿಮಾನಿಗಳನ್ನು ತಲುಪುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.