ಮೈಸೂರು: ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದ ಜುಪಿಟರ್ ಪಟಾಕಿ ದಾಸ್ತಾನು ಮಳಿಗೆಗಳಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿ ಅವಘಡದಲ್ಲಿ ಲಕ್ಷಾಂತರ ರೂ. ಮೌಲ್ಯದ ಪಟಾಕಿ ದಾಸ್ತಾನು ಹೊತ್ತಿ ಉರಿದೆ.
ಹೆಬ್ಬಾಳು ಕೈಗಾರಿಕಾ ಪ್ರದೇಶದ ಬೊಮ್ಮೆನಹಳ್ಳಿ ಕೆರೆ ಪಕ್ಕ ದಡದ ಪಟಾಕಿ ಮಳಿಗೆಯೇ ಏ.19ರಂದು ಬೆಂಕಿ ಆಹುತಿಗೆ ಸಿಲುಕಿದ್ದು. ಬಿರು ಬಿಸಿಲಿನ ಕಾವಿನಿಂದಾಗಿ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು, ಪಟಾಕಿ ದಾಸ್ತಾನು ಮಳಿಗೆಯಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಅಕ್ಕಪಕ್ಕದ ನಿವಾಸಿಗಳಲ್ಲಿ ಭೀತಿ ಉಂಟುಮಾಡಿತ್ತು. ಅದೃಷ್ಟವಸಾತ್ ಸರಿಯಾದ ಸಮಯಕ್ಕೆ ಸ್ಥಳಕ್ಕೆ ಅಗ್ನಿಶಾಮಕ ದಳ ಬಂದು ಬೆಂಕಿ ನಂದಿಸಿದ್ದರಿಂದ ಹೆಚ್ಚನ ಅನಾಹುತ ತಪ್ಪಿತ್ತು.
ಘಟನೆಯಿಂದಾಗಿ ಸದ್ಯಕ್ಕೆ ಯಾವುದೇ ಪ್ರಾಣ ಹಾನಿಯಾಗಿಲ್ಲ. ಹೆಬ್ಬಾಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಬೆಂಕಿ ಅವಘಡ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಪಟಾಕಿ ಮಳಿಗೆಯ ಅವಘಡದಿಂದಾಗಿ ಕೆರೆಯ ಜಲಚರ ಜೀವಿಗಳಿಗೆ ಹಾನಿಯಾಗಿದೆ .ಈ ಪ್ರದೇಶದಲ್ಲಿ ಪಟಾಕಿ ಮಳಿಗೆಗೆ ಅನುಮತಿ ನೀಡಬಾರದೆಂದು ಜಿಲ್ಲಾಧಿಕಾರಿಗಳು, ಆರಕ್ಷಕ ಅಧೀಕ್ಷಕರು, ಅಗ್ನಿಶಾಮಕ ಇಲಾಖೆ, ಗ್ರಾಮ ಪಂಚಾಯಿತಿ, ನಗರ ಸಭೆಗಳಿಗೆ ಮೈಸೂರು ಕೈಗಾರಿಕೆಗಳ ಸಂಘ 15 ವರ್ಷಗಳಿಂದ ನೀಡುತ್ತಿರುವ ಮನವಿಗೆ ಸ್ಪಂದಿಸದೆ ಅನುಮತಿ ನೀಡಲಾಗಿದೆ.
ಕೆಐಎಡಿಬಿ, ಕೈಗಾರಿಕಾ ಪ್ರದೇಶ ಆಭಿವೃದ್ಧಿ ಮಂಡಳಿಯು ತಕರಾರು ಅರ್ಜಿ ಸಲ್ಲಿಸಿತ್ತು. ಕೈಗಾರಿಕೆಗೆ ನಿವೇಶನ ಪಡೆದು ಪಟಾಕಿ ಮಳಿಗೆ ನಡೆಸುತ್ತಿದ್ದರೂ ಯಾರೂ ಕ್ರಮ ಕೈಗೊಳ್ಳಲು ಮುಂದಾಗಲಿಲ್ಲ. ಈಗ ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ಆದೇಶ ಹೊರಡಿಸಬೇಕು ಎಂದು ಮೈಸೂರು ಕೈಗಾರಕೆಗಳ ಸಂಘ ಪ್ರಧಾನ ಕಾರ್ಯದರ್ಶಿ ಸುರೇಶ ಕುಮಾರ್ ಜೈನ್ ಒತ್ತಾಯಿಸಿದ್ದಾರೆ.