ಬೆಂಗಳೂರು: ನಟ ದರ್ಶನ್ ಈ ಹಿಂದೆ ಮಾಧ್ಯಮ ಮಿತ್ರರೊಂದಿಗೆ ಸ್ವಲ್ಪ ಎಡವಟ್ಟು ಮಾಡಿಕೊಂಡಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಹಿನ್ನೆಲೆಯಲ್ಲಿ ಇದೀಗ ದರ್ಶನ್ ಅವರು ಬರೆದಿದ್ದಾರೆ ಎನ್ನಲಾದ ವಿಷಾದ ವ್ಯಕ್ತಪಡಿಸುವ ಪತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಾಧ್ಯಮದವರ ಬಗ್ಗೆ ಅಂದು ದರ್ಶನ್ ಆಡಿದ ಮಾತುಗಳು ಮಾಧ್ಯಮ ಮಿತ್ರರಿಗೆ ನೋವುಂಟು ಮಾಡಿತ್ತು. ಅದಾದ ಬಳಿಕ ದೃಶ್ಯ ಮಾಧ್ಯಮ ಹಾಗೂ ಮುದ್ರಣ ಮಾಧ್ಯಮಗಳು ದರ್ಶನ್ ಅವರ ಸಿನಿಮಾ ಸುದ್ದಿ ಸೇರಿದಂತೆ ಇತರೆ ಸುದ್ದಿಯನ್ನು ಪ್ರಸಾರ ಮತ್ತು ಪ್ರಕಟ ಮಾಡುವುದನ್ನು ನಿರ್ಬಂಧಿಸುವ ಅಘೋಷಿತ ಬಂದ್ ಮಾಡಿದ್ದವು.
ಈಗ ನಟ ದರ್ಶನ್ ಅವರು ತಾವು ಅಂದು ಆಡಿದ ಮಾತುಗಳಿಂದ ನನ್ನ ಮಾಧ್ಯಮ ಮಿತ್ರರಿಗೆ ನೋವುಂಟಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಬರೆದ ಪತ್ರವೊಂದು ಕೆಲ ಮಾಧ್ಯಮಗಳ ಕಚೇರಿಗೂ ತಲುಪಿದೆ ಎನ್ನಲಾಗಿದೆ.
ಪತ್ರದಲ್ಲಿ ಏನಿದೆ?: 75 ವರ್ಷಗಳ ಇತಿಹಾಸವಿರುವ ಕನ್ನಡ ಚಿತ್ರರಂಗದಲ್ಲಿ ಅಳಿಸಲಾಗದ ಕೆಲವು ವ್ಯಕ್ತಿಗಳು ಮತ್ತು ಕೆಲವು ಹೆಸರುಗಳು ಮಾತ್ರ ಚರಿತ್ರೆಯಲ್ಲಿ ಉಳಿದಿವೆ. ಆ ಸಾಲಿನಲ್ಲಿ, ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್, ತೂಗುದೀಪ ಶ್ರೀನಿವಾಸ್, ಬಾಲಕೃಷ್ಣ, ದಿನೇಶ್ ಇವರ ಸಮಕಾಲೀನ ದಿಗ್ಗಜರುಗಳನ್ನು ಕರ್ನಾಟಕದ ಜನತೆ ಮೆಚ್ಚಿಕೊಂಡು ಮೆರೆಸಿದ್ದಾರೆ.
ಅಲ್ಲದೆ ಎಲ್ಲ ಮಾಧ್ಯಮಗಳು ಪ್ರೋತ್ಸಾಹಿಸಿರುತ್ತೀರಿ. ಈ ಸಾಲಿನಲ್ಲಿ ಇದ್ದಂತಹ ಕನ್ನಡ ಚಿತ್ರರಂಗ ಮರೆಯಲಾಗದಂತಹ ನಟ ತೂಗುದೀಪ ಶ್ರೀನಿವಾಸ್ ಅವರ ಕುಟುಂಬದಿಂದ ಬಂದಂತಹ ಸಣ್ಣ ಕುಡಿ ನಾನು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗ ನನ್ನನ್ನು ಆಶೀರ್ವದಿಸಿ ಪ್ರೋತ್ಸಾಹಿಸಿ ಹಲವಾರು ಬಾರಿ ನಾನು ಮಾಡಿರುವ ಪಾತ್ರಗಳ ಬಗ್ಗೆ ವಿಶ್ಲೇಷಣೆ ಮಾಡಿದ್ದೀರಿ.
ಆ ವೇಳೆ ನನ್ನ ಪಾತ್ರದಲ್ಲಿರುವ ತಪ್ಪುಗಳನ್ನು ತಿದ್ದಿ ಹೇಳಿರುವಿರಿ. ನಾನು ಸಹ ಆ ಬಳಿಕ ಮುಂದಿನ ದಿನಗಳಲ್ಲಿ ಮಾಡಿರುವಂತಹ ನನ್ನ ಪಾತ್ರಗಳಲ್ಲಿ ಬಂದಿರುವ ತಪ್ಪುಗಳ ಬಗ್ಗೆ ಎಚ್ಚೆತ್ತುಕೊಂಡು ಉತ್ತಮ ಚಿತ್ರಗಳನ್ನು ಆಯ್ಕೆ ಮಾಡಿಕೊಂಡಿರುವೆನು. ಅದೇ ರೀತಿಯಲ್ಲಿ ನಿಜ ಜೀವನದಲ್ಲಿ ಸಹ ಯಾವುದೋ ಒಂದು ಘಳಿಗೆಯಲ್ಲಿ ಕೆಲ ಅಚಾತುರ್ಯದಿಂದ ಮಾತನಾಡಿರುತ್ತೇನೆ. ಮಾಧ್ಯಮ ಸಹೋದರರಿಗೆ-ಸಹೋದರಿಯರಿಗೆ ನೋವು ಉಂಟಾಗಿರುವುದರಿಂದ ಅದನ್ನು ನಾನು ವಿಷಾದಿಸುತ್ತೇನೆ.
ಜೀವನವೆಂಬುದು ಬಹಳ ಅಮೂಲ್ಯ ಹಾಗೂ ತುಂಬ ಚಿಕ್ಕದ್ದು, ಈ ಚಿಕ್ಕ ಸಮಯದಲ್ಲಿ ನಗು ನಗುತಾ ಬಾಳೋಣ. ನನ್ನ ಈ ಭಾವನೆಯನ್ನು ನನ್ನ ಎಲ್ಲ ಮಿತ್ರರು ಹಾಗೂ ಅಭಿಮಾನಿಗಳು ಅರ್ಥ ಮಾಡಿಕೊಂಡು ಗೌರವಿಸಬೇಕೆಂದು ಮನವಿ ಮಾಡಿದ್ದಾರೆ.
#DarshanThoogudeepa apologies to media after realising his mistake
So he abused the media is true!@tv9kannada @publictvnews @btvnewslive pic.twitter.com/LpXE28rzSK
— 𝑲𝑩𝑶 | 𝑲𝒂𝒓𝒏𝒂𝒕𝒂𝒌𝒂 𝑩𝒐𝒙 𝑶𝒇𝒇𝒊𝒄𝒆 (@Karnatakaa_BO) April 25, 2023