ಶ್ರೀರಂಗಪಟ್ಟಣ: ಹೊಲದಲ್ಲಿ ಹುಲ್ಲು ಕೊಯ್ಯುತ್ತಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ತಾಳಿ ಸಹಿತ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಕಿತ್ತೊಯ್ದ ಘಟನೆ ಬುಧವಾರ ಸಂಜೆ 4ರ ಸಮಯದಲ್ಲಿ ತಾಲೂಕಿನ ಅರಕೆರೆ ಹೋಬಳಿಯ ನೇರಲಕೆರೆ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ತಮ್ಮ ಹೊಲದಲ್ಲಿ ಹಸುಕರುಗಳಿಗೆ ಹಸಿಹುಲ್ಲು ತರಲೆಂದು ಇಂದು ಸಂಜೆ ಹೋಗಿದ್ದ ನೇರಲಕೆರೆ ಗ್ರಾಮದ ಉಮೇಶ್ ಎಂಬುವರ ಪತ್ನಿ ರಂಜಿತಾ ಎಂಬುವರೆ ತಾಳಿ ಸಹಿತ ಸುಮಾರು 40 ಗ್ರಾಂ ಚಿನ್ನದ ಸರ ಕಳೆದುಕೊಂಡ ಮಹಿಳೆ.
ಹೊಲಕ್ಕೆ ಹೋಗಿದ್ದ ರಂಜಿತಾ ಅವರು ಮೇವು ಕೊಯ್ದುಕೊಂಡು ಆ ಮೇವಿನ ಹೊರೆಯನ್ನು ತಲೆಮೇಲೆ ಹೊತ್ತು ಗ್ರಾಮದತ್ತ ಬರುತ್ತಿದ್ದಾಗ ರಸ್ತೆ ಮಧ್ಯೆ ಬೈಕ್ ನಿಲ್ಲಿಸಿಕೊಂಡಿದ್ದ ಇಬ್ಬರು ಕಳ್ಳರು ರಂಜಿತಾ ಅವರನ್ನು ತಡೆದು ಮಾಂಗಲ್ಯ ಸರ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ.
ಈ ವೇಳೆ ವಿರೋಧ ಮಾಡಿದ್ದಕ್ಕೆ ಕುತ್ತಿಗೆ ಬಳಿ ಚಾಕು ಹಿಡಿದುಕೊಂಡ ಕಳ್ಳರು ಕಿರುಚಿಕೊಂಡರೆ ಕೊಲೆ ಮಾಡುವುದಾಗಿ ಹೆದರಿಸಿದ್ದಾರೆ. ಅಲ್ಲದೆ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಕ್ಕೆ ರಂಜಿತಾ ಅವರನ್ನು ಕೆಳಗೆ ಬೀಳಿಸಿ ಎದೆಮೇಲೆ ಕಾಲಿಟ್ಟು ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಇನ್ನು ಈ ಖದೀಮರು ಸರ ಕದಿಯುವ ಮುನ್ನ ತಮ್ಮ ಬೈಕ್‌ನ ನಂಬರ್ ಪ್ಲೇಟ್‌ಗೆ ಮಣ್ಣು ಉಜ್ಜಿದ್ದು ನಂಬರ್ ಕಾಣಿಸದಂತೆ ಮಾಡಿದ್ದಾರೆ. ಅದನ್ನು ಗಮನಿಸಿದ ಆ ಮಾರ್ಗದಲ್ಲಿ ಹೊಲಕ್ಕೆ ಹೋಗುತ್ತಿದ್ದವರು ಬೈಕ್ ಹಿಂದೆ ಬದಿಯಾಗಿದೆ ಏಕೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಇಲ್ಲ ನಾವು ಚುನಾವಣೆ ಪ್ರಚಾರಕ್ಕೆ ಹೋಗಿದ್ದೆವು. ಅಲ್ಲಿ 500 ರೂ. ಕೊಟ್ಟಿದ್ದರು ಆ ಹಣದಿಂದ ಮದ್ಯಪಾನ ಮಾಡಿದ್ದು, ಬರುವಾಗ ಹಳ್ಳಕ್ಕೆ ಬಿದ್ದು ಬೈಕ್‌ಗೆ ಮಣ್ಣಾಗಿದೆ ಎಂದು ಹೇಳಿದ್ದಾರೆ.
ಅವರ ಮಾತನ್ನು ನಂಬಿದ ಗ್ರಾಮದವರು ಸರಿ ಎಂದು ಅವರ ಕೆಲಸಕ್ಕೆ ಹೋಗಿದ್ದಾರೆ. ಆ ಬಳಿಕ ಅಲ್ಲೇ ಹೊಂಚುಹಾಕುತ್ತಿದ್ದ ಕಳ್ಳರು ರಂಜಿತಾ ಬರುತ್ತಿದ್ದಂತೆ ತಲೆ ಮೇಲೆ ಇದ್ದ ಹುಲ್ಲಿನ ಹೊರೆಯನ್ನು ಕೆಳಗೆ ಬೀಳಿಸಿ ನಂತರ ಮಾಂಗಲ್ಯ ಸರಕಿತ್ತುಕೊಂಡು ಪರಾರಿಯಾಗಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅರಕೆರೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧ ದೂರು ದಾಖಲಿಸಿಕೊಂಡು ಕಳ್ಳರ ಪತ್ತಗೆ ಬಲೆ ಬೀಸಿದ್ದಾರೆ.
ನೇರಲಕೆರೆ ಗ್ರಾಮದ ಸುತ್ತ ಮುತ್ತ ಈ ಘಟನೆಗಳು ನಡೆಯುತ್ತಿವೆ. ಈ ಹಿಂದೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ ಮೊಬೈಲ್‌ಪೋನ್ ಕಿತ್ತುಕೊಂಡು ಕಳ್ಳರು ಪರಾರಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಹೀಗಾಗಿ ಗ್ರಾಮದ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಹೊಂಚುಹಾಕಿ ಕೃತ್ಯ ಎಸಗುತ್ತಿರುವ ಖದೀಮರ ಹೆಡೆಮುರಿಕಟ್ಟಬೇಕು ಎಂದು ಪೊಲೀಸರನ್ನು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಅಲ್ಲದೆ ಈ ರೀತಿಯ ಘಟನೆಯಿಂದ ತಮ್ಮ ಹೊಲಗಳಿಗೆ ಹೋಗುವುದಕ್ಕೆ ಮಹಿಳೆಯರು ಹೆದರುವ ಪರಿಸ್ಥಿತಿ ಬಂದಿದ್ದು ಇದಕ್ಕೆ ಪೊಲೀಸರು ಜಾಗೃತರಾಗಿ ಕಳ್ಳರನ್ನು ಹಿಡಿದು ಬುದ್ಧಿ ಕಲಿಸಬೇಕು ಎಂದು ಒತ್ತಾಯಿಸಿದ್ದಾರೆ.