ವಿಜಯಪುರ: ಚುನಾವಣಾ ಕರ್ತವ್ಯದ ತರಬೇತಿಗೆ ತೆರಳುತ್ತಿದ್ದ ಸಿಬ್ಬಂದಿಯ ಸರ್ಕಾರಿ ಬಸ್ ಪಲ್ಟಿಯಾಗಿರುವ ಘಟನೆ ಮುದ್ದೇಬಿಹಾಳ ತಾಲೂಕಿನ ಹಳ್ಳೂರ ಕ್ರಾಸ್ ಬಳಿ ವಿಜಯಪುರ ಮುಖ್ಯ ರಸ್ತೆ ಪಕ್ಕದ ತಗ್ಗಿನಲ್ಲಿ ಜರುಗಿದೆ.
ಮೇ 2 (ಇಂದು) ಬೆಳಗ್ಗೆ ನಡೆದಿದ್ದು, ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿವೆ. 12 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಮುದ್ದೇಬಿಹಾಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. 50 ಜನ ಚುನಾವಣಾ ಅಧಿಕಾರಿಗಳಿದ್ದ, ಕೆಕೆಆರ್‌ಟಿಸಿ ಬಸ್ ಸಿಂದಗಿ ಪಟ್ಟಣದತ್ತ ತೆರಳುತ್ತಿತ್ತು. ಈ ವೇಳೆ ಆಕ್ಸೆಲ್ ತುಂಡಾಗಿದ್ದರಿಂದ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ.
ಬಸ್ಸಿನ ಎಕ್ಸೆಲ್ ತುಂಡಾಗಿ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಇನ್ನು ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಅಂಬುಲೆನ್ಸ್ ಕರೆಸಲಾಗಿದ್ದು, ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಹಿಂದಿನ ಬಸ್ಸಿನಲ್ಲಿದ್ದವರು ಗಾಯಾಳುಗಳ ನೆರವಿಗೆ ಧಾವಿಸಿದ್ದರು.
ಚುನಾವಣಾಧಿಕಾರಿ ಚಂದ್ರಕಾಂತ ಪವಾರ, ತಹಸೀಲ್ದಾರ್ ರೇಖಾ, ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಮುದ್ದೇಬಿಹಾಳದ ಸರ್ಕಾರಿ ಮತ್ತು ಖಾಸಗಿ ಅನುದಾನಿತ ನೌಕರರನ್ನು ಸಿಂದಗಿ ವಿಧಾನಸಭಾ ಮತಕ್ಷೇತ್ರದ ತರಬೇತಿಗೆ ನಿಯೋಜಿಸಿದ್ದರಿಂದ ಅವರನ್ನು ಬಸ್ ಮೂಲಕ ಸಿಂದಗಿಗೆ ಕರೆದೊಯ್ಯಲಾಗುತ್ತಿತ್ತು.
ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಿದ್ದು, ಅವರ ಸ್ಥಾನದಲ್ಲಿ ರಿಸರ್ವ್ ಸಿಬ್ಬಂದಿ ಬಳಸಿಕೊಳ್ಳಲಾಗುತ್ತದೆ ಎಂದು ಚುನಾವಣಾಧಿಕಾರಿ ಚಂದ್ರಕಾಂತ ಪವಾರ ತಿಳಿಸಿದ್ದಾರೆ.