ಮದ್ದೂರು: ಮತ ಹಾಕಲಿಲ್ಲ ಎಂದರೆ ತಮ್ಮ ಹಕ್ಕನ್ನು ಕಳೆದುಕೊಂಡಂತೆ, ಆದ್ದರಿಂದ ಪ್ರತಿಯೊಬ್ಬರೂ ಮತಗಟ್ಟಗೆ ಬಂದು ತಮ್ಮ ಮತ ಚಲಾಯಿಸಬೇಕು ಎಂದು ಸಂಸದೆ ಸುಮಲತಾ ಅಂಬರೀಶ್ ಕರೆ ನೀಡಿದರು.
ಮದ್ದೂರು ತಾಲೂಕು ದೊಡ್ಡರಸಿನಕೆರೆ ಗ್ರಾಮದ ಸರ್ಕಾರಿ ಶಾಲೆಗೆ ಆಗಮಿಸಿ ಗ್ರಾಮಸ್ಥರೊಂದಿಗೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಅಮೂಲ್ಯವಾದ ಮತಹಕ್ಕಿನಿಂದ ವಂಚಿತರಾಗದೆ ಪ್ರತಿಯೊಬ್ಬರೂ ಇದು ನನ್ನ ಜವಾಬ್ದಾರಿಯೂ ಕೂಡ ಹೌದು ಎಂದು ತಿಳಿದು ಮತ ಕೇಂದ್ರಕ್ಕೆ ತೆರಳಿ ಮತದಾನ ಮಾಡಬೇಕು ಎಂದು ಸಲಹೆ ನೀಡಿದರು.
ಇನ್ನು ಸೆಲೆಬ್ರೆಟಿ ಅಥವಾ ಸಂಸದೆ ಎನ್ನುವುದು ಹುದ್ದೆ. ಇಲ್ಲಿಗೆ ಬಂದಾಗ ನಾವೂ ಸಹ ಸಾಮಾನ್ಯ ಜನರ ರೀತಿಯಲ್ಲೇ ನಡೆದುಕೊಳ್ಳಬೇಕು. ಸಂಸದೆ ಎಂಬ ದರ್ಪ ತೋರಿಸುವುದು ಸರಿಯಲ್ಲ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸೆಲೆಬ್ರೆಟಿ ಅಥವಾ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನದಲ್ಲಿರುವವರು ಮತ್ತು ಗಣ್ಯರು ಬಂದರೆ ಸಾಮಾನ್ಯವಾಗಿ ಅವರೊಂದಿಗೆ ಜನರು ಸೆಲ್ಫಿ ತೆಗೆದುಕೊಳ್ಳುತ್ತಾರೆ. ಇದು ಎಲ್ಲ ಕಡೆ ನಡೆಯುತ್ತದೆ. ಅದೂ ಸಹ ನಮ್ಮ ಒಂದು ಭಾಗವಾಗಿರುತ್ತದೆ. ಅದನ್ನೇ ದೊಡ್ಡದು ಮಾಡುವುದು ಸರಿಯಲ್ಲ ಎಂದರು.
ಈ ಬಾರಿಯ ಚುನಾವಣೆಯಲ್ಲಿ ಖಂಡಿತವಾಗಿ ಭಾರತೀಯ ಜನತಾ ಪಕ್ಷಕ್ಕೆ ಒಂದು ನಿಖರವಾದ ಸಂಖ್ಯೆ ಬಂದೇ ಬರುತ್ತದೆ. ಅದು ಎಷ್ಟು ಸ್ಥಾನ ಬರುತ್ತದೆ ಎಂದು ನಾನು ಯಾವಾಗಲೂ ಹೇಳಿಲ್ಲ. ಖಂಡಿತಾ ನಾವು ಹೆಚ್ಚಿನ ಸ್ಥಾನಗಳನ್ನು ಮಂಡ್ಯ ಜಿಲ್ಲೆಯಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮತದಾನ ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯ ಕೂಡ. ಹಾಗಾಗಿ ತಪ್ಪದೇ ಎಲ್ಲರೂ ಮತದಾನ ಮಾಡಿ. ಮತದಾನ ಎನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂಭ್ರಮ. ಇದೊಂದು ಹಬ್ಬದ ಮಾದರಿಯಲ್ಲಿ ಆಚರಿಸುವಂತಹುದ್ದು. ಪ್ರತಿಯೊಬ್ಬರೂ ತಮ್ಮ ಹಕ್ಕನ್ನು ಚಲಾಯಿಸಬೇಕು. ಅದರಿಂದ ಹೆಚ್ಚಿನ ಮನ್ನಣೆ ಬರುತ್ತದೆ ಎಂದು ಹೇಳಿದರು.