ವರುಣಾ: ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಬೂತ್ ಪರಿಶೀಲನೆಗೆ ತೆರಳಿದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿದ್ದು, ಇದರಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದೆ.
ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿಯಿಂದ ವಿ.ಸೋಮಣ್ಣ ಕಣಕ್ಕಿಳಿದ್ದಾರೆ. ಹೀಗಾಗಿ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರವಾಗಿದೆ. ಬುಧವಾರ ಕಾರ್ಯ ಗ್ರಾಮದಲ್ಲಿ ಬೂತ್ ಪರಿಶೀಲನೆಗೆ ತೆರಳಿದ್ದ ಸಂದರ್ಭದಲ್ಲಿ ಸೋಮಣ್ಣ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ. ಇದರಿಂದ ಕೆಲಕಾಲ ಬಿಗುವಿನ ವಾತಾವರಣ ಉಂಟಾಗಿತ್ತು.
ಈ ವೇಳೆ ನೀವೇಕೆ ಇಲ್ಲಿ ಬಂದಿದ್ದೀರಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಸೋಮಣ್ಣ ಅವರನ್ನು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಇದರಿಂದ ವಾತಾವರಣ ಬಿಸಿಯಾಯಿತು. ಆಗ ಅವರೊಂದಿಗೆ ಇದ್ದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಪರ ವಿರೋಧ ಘೋಷಣೆಯ ಕೂಗು ಕೇಳಿಬಂದಿತು.
ಕಾರ್ಯ ಗ್ರಾಮದಲ್ಲಿ ಬೂತ್ ಪರಿಶೀಲನೆಗೆ ಸೋಮಣ್ಣ ಹೋಗಿದ್ದ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪ ಆಪ್ತ ಕಾಪು ಸಿದ್ದಲಿಂಗಸ್ವಾಮಿ ಕೂಡ ಇದ್ದರು. ವಾತಾವರಣ ಬಿಸಿಯಾದಾಗ ಸೋಮಣ್ಣ ವಾಪಸ್ ಹೋದರು ಎನ್ನಲಾಗಿದೆ.