ಬೆಂಗಳೂರು: ಯಲಹಂಕ ನಾಲ್ಕನೇ ಹಂತದ ಬಸ್‌ಸ್ಟ್ಯಾಂಡ್‌ನಲ್ಲಿ ಇದೇ ಮೇ 9ರಂದು ಸಂಜೆ ನಡೆದ ಅಪಘಾತದ ದುರಂತದಲ್ಲಿ ನಿರ್ವಾಹಕ ಸೋಮಣ್ಣ ಎಂಬುವರು ಜೀವ ಕಳೆದುಕೊಂಡರು.
ಆದರೆ, ಇದಕ್ಕೆ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂಬುವುದು ಈಗ ಎದ್ದಿರುವ ಪ್ರಶ್ನೆ. ಮೂಲಗಳ ಪ್ರಕಾರ ಮೇ 9ರಂದೆ ಅಪಘಾತ ಮಾಡಿದ ಚಾಲಕ ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗೆ ಚಾಲಕನಾಗಿ ನೇಮಕಗೊಂಡು ಅದೇ ಮೊದಲ ಬಾರಿಗೆ ಯಾವುದೇ ತರಬೇತಿಯೂ ಇಲ್ಲದೆ ಬಸ್ ಚಾಲನೆ ಮಾಡಿದ್ದಾನೆ.
ಇದರಿಂದ ಆ ಚಾಲಕನಿಗೆ ಯಾವುದನ್ನು ಹೇಗೆ ಆಪರೇಟ್ ಮಾಡಬೇಕು ಎಂಬುವುದು ತಿಳಿದಿಲ್ಲ. ಹೀಗಾಗಿ ಆತ ಡಿಪೋದಿಂದ ಬಸ್‌ಅನ್ನು ನಿಲ್ದಾಣಕ್ಕೆ ತರುತ್ತಿದ್ದಂತೆ ಬ್ರೇಕ್ ಹೊಡೆಯುವ ಬದಲಿಗೆ ಎಕ್ಸ್ಲೇಟರ್‌ಅನ್ನು ಒತ್ತಿದ್ದಾನೆ ಪರಿಣಾಮ 10 ಕಿಮಿ ವೇಗದಲ್ಲೂ ಚಲಿಸಲು ಸಾಧ್ಯವಿಲ್ಲದ ಸ್ಥಳದಲ್ಲೇ ವೇಗವಾಗಿ ಬಸ್ ಚಾಲನೆಗೊಂಡಿದೆ. ಇದರಿಂದ ಅಮಾಯಕರಾದ ನಿರ್ವಾಹಕ ಸೋಮಣ್ಣ ಅವರ ಪ್ರಾಣಹೋಗಿದೆ.
ಇಲ್ಲಿ ಹೊಸದಾಗಿ ನೇಮಕಗೊಂಡ ಚಾಲಕರಿಗೆ ಈಗ ಏನು ಎಲೆಕ್ಟ್ರಿಕ್ ಬಸ್‌ಗಳ ನಿರ್ವಾಹಣೆಯ ಜವಾಬ್ದಾರಿ ಹೊಂದಿದೆಯೋ ಆ ಕಂಪನಿಗೆ ಸಂಬಂಧಪಟ್ಟವರು ತರಬೇತಿ ನೀಡಬೇಕಿತ್ತು. ಆದರೆ ಅದಾವುದೇ ತರಬೇತಿ ನೀಡಿಲ್ಲ. ಟ್ರ್ಯಾಕ್ ತರಬೇತಿಯನ್ನು ಕೊಟ್ಟಿಲ್ಲ. ಜತೆಗೆ ಬಸ್‌ಅನ್ನು ಹೇಗೆ ಆಪರೇಟ್ ಮಾಡಬೇಕು ಎಂಬುದನ್ನು ಹೇಳಿಕೊಡದೆ ಏಕಾಏಕಿ ಬಸ್ ಓಡಿಸುವುದಕ್ಕೆ ಬಿಟ್ಟ ಪರಿಣಾಮ ಈ ರೀತಿಯ ಅಪಘಾತಕ್ಕೆ ಅಧಿಕಾರಿಗಳೇ ಕಾರಣರಾಗಿದ್ದಾರೆ.
ಇನ್ನು ಚಾಲಕನ ಅಜಾಗರುಕತೆಯಿಂದ ಈ ಅಪಘಾತ ಸಂಭವಿಸಿದೆ ಎಂದು ಪರಿಗಣಿಸಬೇಕೋ ಇಲ್ಲ ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳ ಬಗ್ಗೆ ಏನನ್ನು ತಿಳಿಯದ ಚಾಲಕನಿಗೆ ಬಸ್ ಓಡಿಸುವುದಕ್ಕೆ ಅನುಮತಿ ನೀಡಿದ ಅಧಿಕಾರಿಯನ್ನು ಹೊಣೆಗಾರರನ್ನಾಗಿ ಮಾಡಬೇಕೋ?
ನಿತ್ಯ ಬಸ್ ಹತ್ತಿದ ಮೇಲೆ ಇಳಿಯುವವರೆಗೂ ಸಾರ್ವಜನಿಕರ ಮಧ್ಯದಿಂದಲೇ ಬಸ್ ಓಡಿಸಬೇಕಿದೆ. ಹೀಗಿರುವಾಗ ಎಲೆಕ್ಟ್ರಿಕ್ ಬಸ್ ಚಾಲನೆ ಬಗ್ಗೆ ಸ್ವಲ್ಪವೂ ಅರಿಯದ ಚಾಲಕನನ್ನು ಹಾಕುವುದು ಎಷ್ಟು ಸರಿ. ಹೀಗೆ ಮಾಡುವ ಮೂಲಕ ಸಾರ್ವಜನಿಕರ ಜೀವದ ಜತೆ ಆಟವಾಡುವುದಕ್ಕೆ ಈ ಬಿಎಂಟಿಸಿ ಮತ್ತು ಗುತ್ತಿಗೆ ಪಡೆದ ಕಂಪನಿಗೆ ಅಧಿಕಾರ ಕೊಟ್ಟವರು ಯಾರು? ಸರ್ಕಾರ ಇದಕ್ಕೆಲ್ಲ ಸಮ್ಮತಿಸಿದೆ ಎಂದರೆ ಏನು ಅರ್ಥ?
ಹೀಗೆ ಹಲವಾರು ಪ್ರಶ್ನೆಗಳು ಹುಟ್ಟುಕೊಳ್ಳುತ್ತವೆ. ಒಟ್ಟಾರೆ ಸರ್ಕಾರ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲೂ ಎಲೆಕ್ಟ್ರಿಕ್ ಬಸ್‌ಗಳನ್ನು ಹಾಕುವ ಮೂಲಕ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವುದಕ್ಕೆ ತೆರೆ ಮರೆಯಲ್ಲಿ ಮತ್ತು ಬಹಿರಂಗವಾಗಿಯೇ ಕಸರತ್ತು ನಡೆಸಿದ್ದು ಆಗಿದೆ. ಆದರೆ, ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕಾದ ಈ ಸರ್ಕಾರವೇ ಈರೀತಿ ವಾಮ ಮಾರ್ಗ ತುಳಿದು ನಾಡಿನ ಜನರ ಜೀವ ರಕ್ಷಣೆಯನ್ನು ಮರೆತಿರುವುದು ಎಷ್ಟರ ಮಟ್ಟಿಗೆ ಸರಿ?
ಇದನ್ನೂ ಓದಿ: BMTC: ಯಲಹಂಕ ಬಸ್‌ಸ್ಟ್ಯಾಂಡ್‌ನಲ್ಲಿ ನಿರ್ವಾಹಕನಿಗೆ ಗುದ್ದಿದ ಬಸ್ ಸ್ಥಳದಲ್ಲೇ ಕಂಡಕ್ಟರ್ ಸಾವು
ಇನ್ನು ಮೇ 9ರಂದು ಒಬ್ಬ ಅಮಾಯಕ ನಿರ್ವಾಹಕನ ಪ್ರಾಣ ಹೋಗಿದೆ. ಇನ್ನು ಎಷ್ಟು ಜನರ ಪ್ರಾಣ ತೆಗೆದುಕೊಳ್ಳಬೇಕು ಎಂದು ಈ ಸರ್ಕಾರ ಮತ್ತು ಸಾರಿಗೆ ನಿಗಮಗಳ ಅಧಿಕಾರಿಗಳು ಟಾರ್ಗೇಟ್ ಇಟ್ಟುಕೊಂಡಿದ್ದಾರೋ? ಈ ರೀತಿಯ ಚಾಲನೆ ಬಾರದವರನ್ನು ನೇಮಿಸಿಕೊಂಡು ಏಕಾಏಕಿ ಬಸ್ ಓಡಿಸುವುದಕ್ಕೆ ಬಿಡುವುದು ಎಷ್ಟು ಸರಿ. ಇನ್ನಾದರೂ ಈ ಬಗ್ಗೆ ಎಚ್ಚತ್ತುಕೊಳ್ಳದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಸಾರಿಗೆ ಸಂಸ್ಥೆಗಳ ಮೇಲಧಿಕಾರಿಗಳೇ ಜವಾಬ್ದಾರಿ ಹೊರಬೇಕಾಗುತ್ತದೆ.
ನಮಗಾದರೆ ತಿಂಗಳುಗಟ್ಟಲೇ ತರಬೇತಿ ನೀಡಿದ ಬಳಿಕ ಬಸ್‌ಅನ್ನು ಓಡಿಸುವುದಕ್ಕೆ ಅನುಮತಿ ನೀಡುತ್ತಾರೆ. ಅಷ್ಟೇ ಅಲ್ಲ ಯಾವುದೇ ಹೊಸ ಬಸ್ ಡಿಪೋಗೆ ಬಂದರೂ ಮೊದಲು ಆ ಬಸ್‌ಬಗ್ಗೆ ಸಂಪೂರ್ಣವಾಗಿ ತಿಳಿಸಿದ ಬಳಿಕ ನಮಗೆ ಬಸ್ ಕೊಡುತ್ತಾರೆ. ಆದರೆ ಎಲೆಕ್ಟ್ರಿಕ್ ಬಸ್ ಓಡಿಸುವುದಕ್ಕೆ ನೇಮಕಗೊಳ್ಳುವ ಖಾಸಗಿ ಚಾಲಕರಿಗೆ ಏನೊಂದು ತರಬೇತಿ ಕೊಡದೆ ಏಕಾಏಕಿ ಈ ರೀತಿ ಚಾಲನೆ ಮಾಡುವುಕ್ಕೆ ಬಿಡುತ್ತಾರೆ. ಪರಿಣಾಮ ಈ ರೀತಿಯ ಘಟನೆಗಳು ಸಂಭವಿಸುತ್ತವೆ. ಬಿಎಂಟಿಸಿ ಮತ್ತು ಗುತ್ತಿಗೆ ಪಡೆದಿರುವ ಖಾಸಗಿ ಕಂಪನಿಯನ್ನು ಇಂಥ ಘಟನೆಗಳಿಗೆ ಹೊಣೆ ಮಾಡಬೇಕು. ಚಾಲಕರ ಮೇಲೆ ಆರೋಪ ಮಾಡುವುದು ಸರಿಯಲ್ಲ.
l ಹೆಸರೇಳಲಿಚ್ಛಿಸದ ಬಿಎಂಟಿಸಿ ಚಾಲಕ