ನ್ಯೂಡೆಲ್ಲಿ: ದೆಹಲಿ ಸರ್ಕಾರ ಹಾಗೂ ಲೆಫ್ಟಿನೆಂಟ್ ಗವರ್ನರ್ ವಿವಾದ ಸಂಬಂಧ ಚುನಾಯಿತ ಸರ್ಕಾರಕ್ಕೆ ಆಡಳಿತಾತ್ಮಕ ವಿಷಯಗಳ ಬಗ್ಗೆ ಅಧಿಕಾರ ಇರಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪನ್ನು ಎಎಪಿ ಮುಖಂಡರು ಸ್ವಾಗತಿಸಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲೇ ಎಎಪಿ ಮುಖಂಡರು ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳ ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ‘ಈ ತೀರ್ಪು ಪ್ರಜಾಪ್ರಭುತ್ವಕ್ಕೆ ಸಂದ ಜಯ’ ಎಂದು ಹೇಳಿದ್ದಾರೆ.
‘ಚುನಾಯಿತ ಸರ್ಕಾರ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಅಧಿಕಾರ ಹೊಂದಿರುತ್ತದೆ. ಚುನಾಯಿತ ಸರ್ಕಾರದ ಮೂಲಕವೇ ಅಧಿಕಾರಿಗಳು ಕೆಲಸ ಮಾಡುತ್ತಾರೆ’ ಎಂದು ಎಎಪಿ ಟ್ವೀಟ್ ಮಾಡಿದೆ.
ಎಎಪಿ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಟ್ವೀಟ್ ಮಾಡಿ, ಇದು ಐತಿಹಾಸಿಕ ತೀರ್ಪು ಎಂದು ಹೇಳಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರ ಸಂಬಂಧ ದೆಹಲಿ ಸರ್ಕಾರ ಹಾಗೂ ಲೆಫ್ಟಿನೆಂಟ್ ಗವರ್ನರ್ ನಡುವೆ ಉಂಟಾಗಿದ್ದ ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಐವರು ನ್ಯಾಯಮೂರ್ತಿಗಳಿದ್ದ ಸಂವಿಧಾನಿಕ ಪೀಠ, ಜನರಿಂದ ಆಯ್ಕೆಯಾದ ಸರ್ಕಾರಕ್ಕೆ ಆಡಳಿತಾತ್ಮಕ ವಿಷಯಗಳ ಬಗ್ಗೆ ನಿಯಂತ್ರಣ ಇರಬೇಕು ಎಂದು ಸರ್ವಾನುಮತದ ತೀರ್ಪು ನೀಡಿದೆ.
ಈ ಮೂಲಕ ಕೇಂದ್ರ ಸರ್ಕಾರ ಹಾಗೂ ದೆಹಲಿ ಸರ್ಕಾರದ ನಡುವಣ ಹಗ್ಗ ಜಗ್ಗಾಟದಲ್ಲಿ ಆಮ್ ಆದ್ಮಿ ಸರ್ಕಾರದ ಕೈ ಮೇಲಾಗಿದ್ದು, ಕಾನೂನು ಮೀರಿದ ನಡೆಗೆ ಬ್ರೇಕ್ ಹಾಕಿದಂತಾಗಿದೆ.