ನ್ಯೂಡೆಲ್ಲಿ: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರ ಜತೆಗೆ ಕೆಲ ಸಚಿವರು ಕೂಡ ಇದೇ ಮೇ 20ರಂದು ಮಧ್ಯಾಹ್ನ 12.30ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.
ಇಂದು ಮಧ್ಯಾಹ್ನ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅಧಿಕೃತ ಘೋಷಣೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಭಾರತ್‌ಜೋಡೋ ಯಾತ್ರೆಯೂ ಪ್ರಮುಖ ಪಾತ್ರವಹಿಸಿದೆ ಎಂದು ಸ್ಮರಿಸಿದರು.
ಇನ್ನು ರಾಜ್ಯದಲ್ಲಿ ಜೋಡೆತ್ತುಗಳಂತೆ ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರು ಶ್ರಮಿಸಿದ್ದು ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಇಬ್ಬರ ಪಾತ್ರವೂ ಪ್ರಮುಖವಾಗಿದೆ. ಇದಕ್ಕೆ ನಾಡಿನ ಜನರು ಕೂಡ ಕಾರಣರಾಗಿದ್ದು ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಒಂದೇ ಒಂದು ಉಪ ಮುಖ್ಯಮಂತ್ರಿ ಸ್ಥಾನವನ್ನು ಮಾತ್ರ ನೀಡಲಾಗುತ್ತಿದ್ದು, ಮತ್ತಾರಿಗೂ ಕೂಡ ಡಿಸಿಎಂ ಹುದ್ದೆ ನೀಡುವುದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಇನ್ನು ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರೆ ಮುಂದುವರಿಯಲಿದ್ದಾರೆ ಎಂದು ತಿಳಿಸಿದ ಅವರಿಗೆ ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಅಧಿಕಾರ ಹಂಚಿಕೆ ಹೇಗೆ ಎಂದು ಕರ್ನಾಟಕದ ಜನರೆ ನಿರ್ಧಿಸಿದ್ದಾರಲ್ಲ ಎಂದಷ್ಟೇ ಹೇಳಿದರು.