ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ದೂರವಾಣಿ ಮುಖಾಂತರ ಮಳೆಹಾನಿ ಸಂಬಂಧಿಸಿದ ದೂರುಗಳ ವಿವರವನ್ನು ಕೇಂದ್ರ ಕಚೇರಿಯಲ್ಲಿರುವ ಕಂಟ್ರೋಲ್ ರೂಂಗೆ ಖುದ್ದು ಭೇಟಿ ನೀಡಿ ಪಡೆದ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ತ್ವರಿತಗತಿಯಲ್ಲಿ ಈ ದೂರುಗಳನ್ನು ಪರಿಹರಿಸಿ ಇಲ್ಲ ಶಿಸ್ತುಕ್ರಮ ಎದುರಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ತದನಂತರ ಪಾಲಿಕೆ ಕೇಂದ್ರ ಕಚೇರಿಯ ಅನೆಕ್ಸ್-3 ಕಟ್ಟಡದ 6ನೇ ಮಹಡಿಯಲ್ಲಿರುವ ಕೊಮ್ಯಾಂಡ್ ಕಂಟ್ರೋಲ್ ಸೆಂಟರ್ಗೆ ಭೇಟಿ ನೀಡಿ ಸಹಾಯ ತಂತ್ರಾಂಶದ ಮುಖಾಂತರ ಬಂದಿರುವ ವಲಯವಾರು ಮಳೆಹಾನಿ ಸಂಬಂಧಿಸಿದ ದೂರುಗಳನ್ನು ಪರಿಶೀಲಿಸಿದರು.
ಈ ಪೈಕಿ ಸಹಾಯ ತಂತ್ರಾಂಶದಲ್ಲಿ ಸುಮಾರು 70 ದೂರುಗಳು ಬಂದಿದ್ದು, ಮೂರು ದಿನಗಳೊಳಗಾಗಿ ಬಂದಿರುವಂತಹ ದೂರುಗಳನ್ನು ಪರಿಹರಿಸಬೇಕು ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮುಂದುವರಿದು, ವಿಪತ್ತು ನಿರ್ವಹಣೆಗಾಗಿ ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ ಹಾಗೂ ಪೊಲೀಸ್ ಇಲಾಖೆಯಿಂದ ನೋಡಲ್ ಅಧಿಕಾರಿಯನ್ನು ತಕ್ಷಣವೇ ನೇಮಿಸಲು ಸೂಚಿಸಿದರು. ಮಳೆ ಹಾನಿ ಸಂಬಂಧ ದೂರಿನ ಮಾಹಿತಿ ಹಾಗೂ ತೆಗೆದುಕೊಂಡಿರುವ ಮಾಹಿತಿಯನ್ನು ತಮ್ಮ ಗಮನಕ್ಕೆ ತರಲು ಎಲ್ಲ ಅಧಿಕಾರಿಗಳಿಗೆ ಸೂಚಿಸಿದರು.
ವಿಶೇಷ ಆಯುಕ್ತ (ಮಾಹಿತಿ ತಂತ್ರಜ್ಞಾನ) ಉಜ್ವಲ್ ಕುಮಾರ್ ಗೋಷ್ ಹಾಗೂ ಬಿಬಿಎಂಪಿ ಉಪ ಆಯುಕ್ತರು ( ಅಡಳಿತ) ಮಂಜುನಾಥ ಸ್ವಾಮಿ.ಬಿ.ಎಸ್ ಇತರರು ಉಪಸ್ಥಿತರಿದ್ದರು