ಯಲಬುರ್ಗಾ: ಕೇಂದ್ರ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ 2000 ರೂ. ಮುಖಬೆಲೆಯ ನೋಟುಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ನಿರ್ವಾಹಕರು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುವಂತೆ ಯಲಬುರ್ಗಾ ಸಾರಿಗೆ ಘಟಕದ ವ್ಯವಸ್ಥಾಪಕರು ನಡೆದುಕೊಂಡಿದ್ದಾರೆ.
ಶನಿವಾರ ತಮ್ಮ ಘಟಕದ ಎಲ್ಲ ನಿರ್ವಾಹಕರಿಗೂ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಪ್ರಯಾಣಿಕರಿಂದ ಪಡೆಯಬಾರದು ಎಂದು ಆದೇಶ ಹೊರಡಿಸಿ ಆ ಆದೇಶದ ಪ್ರತಿಯನ್ನು ಘಟಕದ ನೋಟಿಸ್ ಬೋರ್ಡ್‌ನಲ್ಲಿ ಹಾಕುವ ಮೂಲಕ ದುರಾಡಳಿತ ಮತ್ತು ನಿರ್ವಹಾಕರ ಮೇಲೆ ದೌರ್ಜನ್ಯ ನಡೆಸುಲು ಮುಂದಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಆರ್‌ಬಿಐ 2 ಸಾವಿರ ರೂ. ನೋಟುಗಳನ್ನು ನಿಷೇಧಿಸುವುದಾಗಿ ಹೇಳಿದೆ. ಆದರೆ ಅದಕ್ಕೆ 2023ರ ಸೆಪ್ಟೆಂಬರ್‌ವರೆಗೂ ಕಾಲವಕಾಶ ನೀಡಿದ್ದು, ಅಷ್ಟರೊಳಗೆ ಚಲಾವಣೆ ಮಾಡಬಹುದು. ಆದರೆ, ಬ್ಯಾಂಕ್‌ಗಳಿಂದ ಆ ನೋಟುಗಳನ್ನು ನೀಡಬಾರದು ಎಂದು ಸೂಚನೆ ನೀಡಿದೆ.
ಇನ್ನು ಬ್ಯಾಂಕ್‌ಗಳಿಂದ 2 ಸಾವಿರ ರೂ. ನೋಟುಗಳನ್ನು ನೀಡಬಾರದು, ಆದರೆ ಪಡೆಯಬೇಕು ಎಂದು ಹೇಳಿದೆಯೇ ಹೊರತು, ಸಾರಿಗೆ ಬಸ್‌ನಲ್ಲಿ ಕೊಡಬಾರದು ಎಂದು ಹೇಳಿಲ್ಲ. ಇನ್ನು ಸಾರ್ವಜನಿಕರಿಂದ ಪಡೆದ 2000 ರೂ. ಮುಖಬೆಲೆಯ ಆ ಹಣವನ್ನು ಘಟಕದಿಂದ ಬ್ಯಾಂಕ್‌ನಲ್ಲೇ ಜಮಾ ಮಾಡುವುದರಿಂದ ಸಮಸ್ಯೆ ಏನಾಗುತ್ತದೆ. ಏನು ಆಗುವುದಿಲ್ಲವಲ್ಲ, ಆದರೂ ಈ ರೀತಿಯ ಆದೇಶ ಏಕೆ ಹೊರಡಿಸಿದ್ದಾರೆ ಈ ಡಿಎಂ ಎಂಬುವುದು ಈಗ ಯಕ್ಷ ಪ್ರಶ್ನೆಯಾಗಿದೆ.
ಈ ಆದೇಶ ಹೊರಡಿಸಿರುವ ಘಟಕ ವ್ಯವಸ್ಥಾಪಕರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು ಎಂದು ಸಮಸ್ಯೆಗೆ ಸಿಲುಕಿರುವ ನೌಕರರು ಆಗ್ರಹಿಸಿದ್ದಾರೆ.