ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ಪಲ್ಟಿಯದ ಪರಿಣಾಮ ನಾಲ್ವರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಜಿಲ್ಲೆಯ ಕಮಲಾಪುರ ತಾಲೂಕಿನ ಕಿಣ್ಣಸಡಕ್ ಸಮೀಪದಲ್ಲಿ ನಡೆದಿದೆ.
ಕಲಬುರಗಿ–ಹೈದರಾಬಾದ್ ನಡುವೆ ಸಂಚರಿಸುತ್ತಿದ್ದ ಬಸ್, ಇಂದು ಸೋಮವಾರ ಮುಂಜಾನೆ 5.30ರ ಸುಮಾರಿಗೆ ಅವಘಡ ಸಂಭವಿಸಿದೆ. ಹೈದರಾಬಾದ್‌ನಿಂದ ಕಲಬುರಗಿಗೆ ಬರುತ್ತಿದ್ದ ವೇಳೆ ಕಿಣ್ಣಸಡಕ್‌ನ ದರ್ಗಾ ಸಮೀಪವಿರುವ ಹೊಡ್ಡು ಹಾಗೂ ಹೆದ್ದಾರಿಯ ತಿರುವಿನಲ್ಲಿ ಎದುರಿಗೆ ವೇಗವಾಗಿ ಲಾರಿ ಬರುತ್ತಿತ್ತು. ಆ ವೇಳೆ ಲಾರಿಗೆ ಡಿಕ್ಕಿ ಆಗುತ್ತದೆ ಎಂದು ಅದನ್ನು ತಪ್ಪಿಸಲು ಚಾಲಕ ಒಂದೇ ಬಾರಿ ಬ್ರೇಕ್ ಹಾಕಿ ಪಕ್ಕಕ್ಕೆ ತೆಗೆದುಕೊಳ್ಳಲು ಯತ್ನಿಸಿದಾಗ ಆಯ ತಪ್ಪಿ ಬಸ್ ಪಲ್ಟಿಯಾಗಿದೆ.
ಬಸ್ ಪಲ್ಟಿಯಾಗಿ ರಸ್ತೆಯಲ್ಲೇ ಬಿದ್ದಿದ್ದರಿಂದ ಕೆಲ ಕಾಲ ಸಂಚಾರಕ್ಕೆ ಅಡಚಣೆ ಎದುರಾಯಿತು. ವಿಷಯ ತಿಳಿದ ಕಮಲಾಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಈ ಸಂಬಂಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಸಿಪಿಐ ವಿ. ನಾರಾಯಣ, ಎಸ್ಐ ವಿಶ್ವನಾಥ ಮುದ್ದಾರೆಡ್ಡಿ, ಕುಪೇಂದ್ರ, ರಾಜಶೇಖರ ನಾಶಿ ಅವರು ಭೇಟಿ ನೀಡಿದ್ದರು.