ಮೈಸೂರು: ಖಾಸಗಿ ಬಸ್ ಹಾಗೂ ಇನ್ನೋವಾ ನಡುವೆ ಇಂದು ಸಂಭವಿಸಿದ ಭೀಕರ ಅಪಘಾತದಲ್ಲಿ 8 ಮಂದಿ ಮೃತಪಟ್ಟಿರುವ ಘಟನೆ ಕೊಳ್ಳೇಗಾಲದ – ತಿ.ನರಸೀಪುರ ಮುಖ್ಯ ರಸ್ತೆಯ ಕುರುಬೂರು ಗ್ರಾಮದ ಪಿಂಜರ ಪೋಲ್ ಬಳಿ ನಡೆದಿದೆ.
ಮೈಸೂರು ಜಿಲ್ಲೆಯ ಕುರುಬೂರು ಗ್ರಾಮದ ಬಳಿ ಜರುಗಿದ ಅವಘಡದ ರಭಸಕ್ಕೆ ಇನ್ನೋವಾ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ರಸ್ತೆಯಲ್ಲಿ ಕಾರಿನ ಹಲವು ಭಾಗಗಳು ಉದುರಿ ಬಿದ್ದಿದ್ದವು.
ಕಾರಿನಲ್ಲಿದ್ದ 7 ಮಂದಿ ಸೇರಿದಂತೆ 1 ಮಗು ಕೂಡ ಸ್ಥಳದಲ್ಲೇ ಮೃತಪಟ್ಟಿದೆ. ಇನ್ನು ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತ 8 ಮಂದಿಯೂ ಬಳ್ಳಾರಿ ಮೂಲದವರು ಎಂದು ತಿಳಿದು ಬಂದಿದೆ. ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ನರಸೀಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅವಘಡ ಸಂಬಂಧ ತಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕಣರ ದಾಖಲಾಗಿದೆ.
ಕಳೆದೊಂದು ವಾರದಿಂದ ರಾಜ್ಯಾದ್ಯಂತ ಭೀಕರ ಅಪಘಾತಗಳು ಸಂಭವಿಸುತ್ತಿವೆ. ಅದರಲ್ಲಿ ಬಸ್, ಕಾರು, ಲಾರಿ, ಬೈಕ್‌ಗಳು ಸೇರಿ ಬಹುತೇಕ ವಾಹನಗಳು ನಜ್ಜುಗುಜ್ಜಾಗಿ ಪ್ರಾಣಹಾನಿ ಸಂಭವಿಸಿರುವುದು ಹೆಚ್ಚಾಗಿದೆ. ಹೀಗಾಗಿ ವಾಹನ ಚಲಾಯಿಸುವವರು ಕೂಡ ಭಾರಿ ಎಚ್ಚರಿಕೆಯಿಂದ ಚಾಲನೆ ಮಾಡಬೇಕು ಎಂದು ಪ್ರಜ್ಞಾವಂತ ನಾಗರಿಕರು ಸಲಹೆ ನೀಡಿದ್ದಾರೆ.
ಸರ್ಕಾರ ಕ್ಷಣವೇ 10 ಲಕ್ಷ ರೂ. ಪರಿಹಾರ ನೀಡಬೇಕು: ಬಳ್ಳಾರಿಯವರು ಮಹದೇಶ್ವರ ಬೆಟ್ಟಕ್ಕೆಹೋಗುತ್ತಿದ್ದರು. ಮೈಸೂರಿನಲ್ಲಿ ಇನ್ನೋವಾ ಕಾರ್ ಬಾಡಿಗೆ ಪಡೆದು ಹೋಗುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರಸ್ತೆಯ ಪಕ್ಕದಲ್ಲಿ ಜಂಗಲ್ ಕಟಿಂಗ್ ಮಾಡದೇ ಇದ್ದ ಕಾರಣ ಎದುರು ಬದುರು ವಾಹನಗಳಿಗೆ ಕಾಣದೇ ಇದ್ದ ಕಾರಣ ಇಂತಹ ಭೀಕರ ಅಪಘಾತ ಆಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಇದರ ಹೊಣೆ ಹೊರಬೇಕು. ಅಪಘಾತದಲ್ಲಿ ಮಡಿದ ಎಲ್ಲ ಕುಟುಂಬಗಳಿಗೂ ಸರ್ಕಾರ ಕ್ಷಣವೇ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ರೈತ ರತ್ನ ಕುರುಬೂರು ಶಾಂತಕುಮಾರ ಒತ್ತಾಯಿಸಿದ್ದಾರೆ.