ಕಾರವಾರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕಾರವಾರ ಘಟಕದ ಬಸ್ನಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ 4.5 ರೂ. ಮೌಲ್ಯದ ಚಿನ್ನಾಭರಣ, ನಗದಿದ್ದ ಬ್ಯಾಗನ್ನು ವಾಪಸ್ ಮರಳಿಸುವ ಮೂಲಕ ಚಾಲಕ ಮತ್ತು ನಿರ್ವಾಹಕ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.
ಸೋಮವಾರ ಚಿಕ್ಕಮಗಳೂರು ಕಾರವಾರ ಮಾರ್ಗದಲ್ಲಿ ಬಸ್ ಕಾರ್ಯಾಚರಯಲ್ಲಿದ್ದಾಗ ಮರೆತು ಬಿಟ್ಟು ಹೋಗಿದ್ದ ಬ್ಯಾಗ್ಅನ್ನು ಗಮನಿಸಿದ ಚಾಲನಾ ಸಿಬ್ಬಂದಿ ಅದನ್ನು ತೆಗೆದುಕೊಂಡು ನೋಡಿದಾಗ ಅದರಲ್ಲಿ ಸುಮಾರು 3.50 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣ ಹಾಗೂ 1 ಲಕ್ಷ ರೂಪಾಯಿ ಹಣವಿತ್ತು.
ಈ ಬಗ್ಗೆ ಘಟಕ ವ್ಯವಸ್ಥಾಪಕರಿಗೆ ವಿಷಯ ಮುಟ್ಟಿಸಿದ ಸಿಬ್ಬಂದಿ ಬಳಿಕ ಅದನ್ನು ಕಳೆದುಕೊಡಿಂದ್ದವರಿಗೆ ಡಿಎಂ ಸಮ್ಮುಖದಲ್ಲೇ ವಾಪಸ್ ಕೊಟ್ಟಿದ್ದಾರೆ.
ಹೌದು! ನಮ್ಮ ಸಂಸ್ಥೆಯ ಕಾರವಾರ ಘಟಕದ ಹೆಮ್ಮೆಯ ನಿರ್ವಾಹಕ ಹರೀಶ್ ಎಚ್. (ಐಡಿ-2207) ಹಾಗೂ ಚಾಲಕ ಸ್ಟೆಫನ್ ಫರ್ನಾಂಡಿಸ್ (ಐಡಿ-1763) ಅವರು ಈ ಮಾನವೀಯತೆ ಮೆರೆದಿದ್ದು ಅವರ ಕಾರ್ಯ ಶ್ಣಾಘನೀಯವಾಗಿದೆ ಎಂದು ನಿಗಮದ ಅಧಿಕಾರಿಗಳು ಪ್ರಶಂಸಿಸಿದ್ದಾರೆ.
ಸೋಮವಾರ ಮೇ 29-2023 ರಂದು ಅನುಸೂಚಿ ಸಂಖ್ಯೆ 94/ 95 ಚಿಕ್ಕಮಗಳೂರು ಕಾರವಾರ ಮಾರ್ಗದಲ್ಲಿ ಕಾರ್ಯಾಚರಿಸುತ್ತಿದ್ದಾಗ 3.50 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣ ಹಾಗೂ 1 ಲಕ್ಷ ರೂಪಾಯಿ ನಗದು ಬ್ಯಾಗ್ನಲ್ಲಿ ಇತ್ತು. ಆದರೆ, ಆ ಬ್ಯಾಗ್ನಲ್ಲಿ ಮೊದಲು ಏನಿದೆ ಎಂಬುವುದು ತಿಳಿಯಲಿಲ್ಲ.
ನಾವು ಕೂಡ ಅದರಲ್ಲಿ ಏನಿದೆಯೊ ಎಂದು ಭಯದಲ್ಲೇ ತೆಗೆದುಕೊಂಡು ನೋಡಿದಾಗ ಆಭರಣ ಮತ್ತು ಹಣ ಇರುವುದು ಗೊತ್ತಾಯಿತು. ಆ ಬಳಿಕ ಬ್ಯಾಗ್ ಬಗ್ಗೆ ವಿಷಯ ತಿಳಿಸಿ ಘಟಕ ವ್ಯವಸ್ಥಾಪಕರಿಗೆ ನೀಡಿದೆವು. ಅಷ್ಟರಲ್ಲಿ ಬ್ಯಾಗ್ ಕಳೆದುಕೊಂಡವರು ಕೂಡ ಬಂದರು. ಹೀಗಾಗಿ ಘಟಕ ವ್ಯವಸ್ಥಾಪಕ ಸಮ್ಮುಖದಲ್ಲಿ ವಾರಸುದಾರರಿಗೆ ಹಸ್ತಾಂತರಿಸಿದೆವು ಎಂದು ಚಾಲನಾ ಸಿಬ್ಬಂದಿ ಹೇಳಿದ್ದಾರೆ.
ಇನ್ನು ಚಾಲಕ, ನಿರ್ವಾಹಕರು ಪ್ರಯಾಣಿಕರ ಮೆಚ್ಚುಗೆಗೆ ಪಾತ್ರರಾಗಿ ಸಂಸ್ಥೆಯ ಘನತೆ ಹೆಚ್ಚಿಸಿದ್ದಾರೆ ಎಂದು ಸಂಸ್ಥೆಯ ಪರವಾಗಿ ಘಟಕ ವ್ಯವಸ್ಥಾಪಕರು ಹಾಗೂ ಆಭರಣ ಮತ್ತು ಹಣ ಮರಳಿ ಸಿಕ್ಕಿದ್ದಕ್ಕೆ ಪ್ರಯಾಣಿಕರು ಚಾಲಕ ಹಾಗೂ ನಿರ್ವಾಹಕರಿಗೆ ಅಭಿನಂದನೆಗಳನ್ನು ತಿಳಿಸಿದರು.