ಬೆಂಗಳೂರು ಗ್ರಾಮಾಂತರ: ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ವತಿಯಿಂದ ಜಿಲ್ಲೆಯಲ್ಲಿ 08 ಮಂದಿ ಸ್ವ ಉದ್ಯೋಗ ಸಾಲ ಪಡೆದುಕೊಂಡಿದ್ದು ಜೀವನವನ್ನು ರೂಪಿಸಿಕೊಳ್ಳುತ್ತಿದ್ದಾರೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಕೆ.ದೀಪಶ್ರೀ ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಫಲಾನುಭವಿಗಳನ್ನು ಸ್ವತಃ ಭೇಟಿ ಮಾಡಿ ಪಡೆದ ಸಾಲವನ್ನು ಸದುಪಯೋಗಪಡಿಸಿಕೊಳ್ಳುತ್ತಿರುವುದನ್ನು ಪರಿಶೀಲಿಸಿ ಖಾತರಿಪಡಿಸಿಕೊಂಡ ನಂತರ ಅವರು ಮಾತನಾಡಿದರು.
ದಿನಸಿ ಅಂಗಡಿ ಮಾಲೀಕ ಫಲಾನುಭವಿಯು ನಿಗಮ ಕೊಟ್ಟ ಸಾಲವನ್ನು ಬಂಡವಾಳಕ್ಕೆ ಹೂಡಿಕೆ ಮಾಡಿ ವ್ಯಾಪಾರ ವೃದ್ಧಿಸಿಕೊಂಡಿದ್ದಾರೆ ಹೀಗೆ ಉಳಿದ ಫಲಾನುಭವಿಗಳು ಇನ್ನಿತರ ವ್ಯಾಪಾರ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
1 ಲಕ್ಷ ರೂ. ಸಾಲ ಪಡೆದರೆ 20 ಸಾವಿರ ರೂ. ಸಬ್ಸಿಡಿ: ರಾಜ್ಯಾದ್ಯಂತ 3000ಕ್ಕೂ ಅಧಿಕ ಫಲಾನುಭವಿಗಳಿಗೆ ನಿಗಮದ ಮೂಲಕ ಸ್ವ ಉದ್ಯೋಗ ಆರಂಭಿಸಲು ಸಾಲ ನೀಡಲಾಗಿದೆ. 1 ಲಕ್ಷ ರೂ. ಸಾಲ ಪಡೆದರೆ 20,000 ಸಬ್ಸಿಡಿ ದೊರೆಯುತ್ತದೆ. ಉಳಿದ 80000 ಸಾಲವನ್ನು ಮೂರು ವರ್ಷಗಳ ಕಾಲಾವಧಿಯಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಮಾಸಿಕ ಕಂತುಗಳಲ್ಲಿ ಪಾವತಿ ಮಾಡುವ ವ್ಯವಸ್ಥೆ ಇರುವುದರಿಂದ ಸಾಲ ಪಡೆದ ಫಲಾನುಭವಿಗಳು ಕಂತುಗಳನ್ನು ಮರುಪಾವತಿ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಮರುಪಾವತಿಗಾಗಿ ಆ್ಯಪ್ ಆರ್ಯ ವೈಶ್ಯ ನಿಗಮವೇ ಮೊದಲು: ಆರ್ಯ ವೈಶ್ಯ ಸಮುದಾಯದ ಅಭಿವೃದ್ಧಿ ನಿಗಮದಿಂದ ಸಾಲ ಪಡೆದ ಫಲಾನುಭವಿಗಳು ಗ್ರಾಮೀಣ ಭಾಗ ಮತ್ತು ತೀರಾ ಕುಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ. ಪ್ರತಿ ತಿಂಗಳು ಕಂತು ಪಾವತಿ ಮಾಡಲು ನಗರ ವ್ಯಾಪ್ತಿಯ ಬ್ಯಾಂಕುಗಳಿಗೆ ಬರುವುದು ಕಷ್ಟ. ಆದ್ದರಿಂದ ಫಲಾನುಭವಿಗಳು ತಮ್ಮ ಮನೆಯಿಂದಲೇ ಸುಲಭವಾಗಿ ಸಾಲ ಮರುಪಾವತಿ ಮಾಡುವ ಮೊಬೈಲ್ ಆ್ಯಪ್‌ಅನ್ನು ನಿಗಮದಿಂದ ಸೃಜಿಸಲಾಗಿದೆ ಎಂದರು.
ಆರ್ಯ ವೈಶ್ಯ ಪೋರ್ಟಲ್: ನಿಗಮದ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಪ್ರಚಾರ ನೀಡುವ ಸಲುವಾಗಿ ಆರ್ಯವೈಶ್ಯ ಪೋರ್ಟಲ್‌ಅನ್ನು ನಿಗಮ ಸಿದ್ಧಪಡಿಸಿದೆ. ರಾಜ್ಯದಲ್ಲಿರುವ ಆರ್ಯವೈಶ್ಯ ಕುಟುಂಬಗಳ ವಿವರ ನಿರುದ್ಯೋಗಿಗಳು ಅಕ್ಷರಸ್ಥರು, ಅನಕ್ಷರಸ್ಥರು ಇತ್ಯಾದಿ ಮಾಹಿತಿ ಸಂಗ್ರಹಿಸಲು ಈ ಪೋರ್ಟಲ್ ಸಹಾಯ ಮಾಡಲಿದೆ ಎಂದು ತಿಳಿಸಿದರು.
ಪರಿಶೀಲನೆ ವೇಳೆ ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯವಸ್ಥಾಪಕ ರಂಗನಾಥ್ ಉಪಸ್ಥಿತರಿದ್ದರು.