ಬೆಂಗಳೂರು: ರಾಜ್ಯಾದ್ಯಂತ ಮಹಿಳೆಯರು ಇನ್ನು ಮುಂದೆ ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ 5 ಗ್ಯಾರೆಂಟಿಗಳಲ್ಲಿ ಒಂದಾದ ಮಹಿಳೆಯರಿಗೆ ಸಾರಿಗೆ ನಿಗಮಗಳ ಬಸ್ಗಳಲ್ಲಿ ಉಚಿತ ಪ್ರಯಾಣ ಸಂಬಂಧ ಮಂಗಳವಾರ (ಮೇ 30) ಶಾಂತಿನಗರದ ಕೆಎಸ್ಆರ್ಟಿಸಿ ಕಚೇರಿಯಲ್ಲಿ ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಜತೆ ಸಭೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ನಿಗಮಗಳ ಬಸ್ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ನಮ್ಮ ಪ್ರಣಾಳಿಕೆಯಲ್ಲಿ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ದಾರರು ಎಂದು ಹೇಳಿಲ್ಲ. ಹಾಗಾಗಿ ರಾಜ್ಯಾದ್ಯಂತ ಎಲ್ಲ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು ಎಂದರು.
ಆದರೆ ಈ ಬಗ್ಗೆ ಕ್ಯಾಬಿನೆಟ್ನಲ್ಲಿ ಮುಖ್ಯಮಂತ್ರಿಗಳು ಘೋಷಣೆ ಮಾಡುತ್ತಾರೆ. ಅದಕ್ಕೂ ಮೊದಲು ನಾವು ಏನೂ ಹೇಳುವುದಿಲ್ಲ. ರಾಜ್ಯದ ಎಲ್ಲ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣವನ್ನು ಖಂಡಿತವಾಗಿ ಜಾರಿಗೆ ತರುತ್ತೇವೆ. ನಾವು ಪ್ರಣಾಳಿಕೆಯಲ್ಲಿ ಯಾವುದೇ ನಿಯಮಗಳನ್ನು ಹೇಳಿಲ್ಲ. ಹೀಗಾಗಿ ಎಲ್ಲ ಮಹಿಳೆಯರು ಸರ್ಕಾರಿ ಸಾರಿಗೆ ಬಸ್ನಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು. ನಾಳೆ ಮುಖ್ಯಮಂತ್ರಿಗಳ ಜತೆ ಸಭೆ ಇದೆ. ಆ ಬಳಿಕ ಎಲ್ಲವು ಗೊತ್ತಾಗಲಿದೆ ಎಂದರು.
4 ನಿಗಮಗಳ ಎಂಡಿಗಳ ಜತೆ ಸಭೆ ಮಾಡಲಾಗಿದೆ. ಆರ್ಥಿಕ ಪರಿಸ್ಥಿತಿ ಕುರಿತ ಮಾಹಿತಿ ಲಭಿಸಿದೆ. ಕೋವಿಡ್ ಸಂದರ್ಭದಲ್ಲಿ ನಷ್ಟದ ಕುರಿತ ಮಾಹಿತಿ ಲಭಿಸಿದೆ. ನೇಮಕಾತಿ ಆಗದಿರುವುದು ಮತ್ತು ಬಸ್ಗಳ ಖರೀದಿ ಬಗ್ಗೆ ಚರ್ಚೆ ಆಗಿದೆ. ಇಡೀ ದೇಶದಲ್ಲೇ ಒಳ್ಳೆಯ ಸಂಸ್ಥೆಗಳು ಇವು. 350 ರಿಂದ 400 ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿವೆ ಎಂದರು.
4 ಸಾರಿಗೆ ನಿಗಮಗಳಲ್ಲಿ 240 ಘಟಕಗಳು ಕಾರ್ಯನಿರ್ವಹಣೆ ಮಾಡುತ್ತಿವೆ. 23,978 ವಾಹನಗಳಿವೆ. 1,04,650 ಕ್ಕೂ ಹೆಚ್ಚು ಸಿಬ್ಬಂದಿಗಳಿದ್ದಾರೆ. ನಿತ್ಯ ರಾಜ್ಯಾದ್ಯಂತ 82,51 ಲಕ್ಷ ಪ್ರಯಾಣಿಕರು ಓಡಾಡ್ತಾರೆ. ನಾಲ್ಕು ನಿಗಮಗಳ ನಿತ್ಯದ ಒಟ್ಟು ಆದಾಯ 2,31,332 ಲಕ್ಷ ರೂ. ಇದೆ. ಇನ್ನು ಎಂಡಿಗಳು ಇಂದು 3 ರಿಂದ 4 ಆಯ್ಕೆಗಳನ್ನು ತಿಳಿಸಿದ್ದಾರೆ. ಈ ಯೋಜನೆ ಅನುಷ್ಠಾನಕ್ಕೆ ಬರುವುದರಲ್ಲಿ ಸಂಶಯವೇ ಇಲ್ಲ ಎಂದು ಭರವಸೆ ನೀಡಿದರು.
ಸಾರಿಗೆ ನಿಗಮಗಳ ಎಂಡಿಗಳ ಜತೆ ಇಂದಿನ ಸಭೆಯಲ್ಲಿ ಸಾಧಕ ಬಾಧಕಗಳ ಬಗ್ಗೆ ಸಮಾಲೋಚನೆ ನಡೆಸಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಭೆಯ ವರದಿ ಸಲ್ಲಿಸುತ್ತೇವೆ ಎಂದ ಅವರು, ನಾಳೆ ಉಚಿತ ಪ್ರಯಾಣವನ್ನು ಸಿಎಂ ಫೈನಲ್ ಮಾಡ್ತಾರೆ. ಯಾವುದೇ ನಿರ್ಬಂಧವಿಲ್ಲದೇ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಣೆ ಮಾಡುತ್ತೇವೆ. ಬಿಜೆಪಿಯವರ ಹತ್ತಿರ ನಾವು ಹೇಳಿಸಿಕೊಳ್ಳಬೇಕಿಲ್ಲ. ಅವರು ಪ್ರತಿಭಟನೆ ಮಾಡುವುದಕ್ಕೆ ಅವಕಾಶವೇ ನೀಡೋದಿಲ್ಲ ಎಂದು ಹೇಳಿದರು.