BMTC 13ನೇ ಘಟಕದ ಕೌನ್ಸಿಲಿಂಗ್ ಕರ್ಮಕಾಂಡ: ಎಣ್ಣೆ ಪಾರ್ಟಿಗೆ ಸಪೋರ್ಟ್ ಮಾಡುವವರಿಗೆ ಡ್ಯೂಟಿ ರೋಟಾ ಥೂ ಇದೆಂಥ ಪದ್ಧತಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ನಿಗಮದ 13ನೇ ಘಟಕದ ಅಧಿಕಾರಿಗಳು ಸೇವಾ ಹಿರಿತನವನ್ನು ಪರಿಗಣಿಸದೆ ಎಣ್ಣೆ, ಕಬಾಬು ತಂದು ಕೊಡುವ ಜೂನಿಯರ್‌ಗಳಿಗೆ ಮಣೆ ಹಾಕುತ್ತಿದ್ದು, ಡಿಪೋನಲ್ಲಿ ನಿಷ್ಠಾವಂತ ಪ್ರಾಮಾಣಿಕ ನೌಕರರು ಕೆಲಸ ಮಾಡಲಾಗದಂತ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಏ.19ರ ಶನಿವಾರ ವಿವಿಧ ಕಾರಣಗಳಿಂದ ತೆರವಾಗಿದ್ದ ಮಾರ್ಗಗಳಿಗೆ ಡ್ಯೂಟಿ ರೋಟಾ ಕೌನ್ಸಿಲಿಂಗ್ ಮಾಡಿದ್ದು, ಈ ಬಗ್ಗೆ ಘಟಕದಲ್ಲಿ ಇರುವ ಸುಮಾರು 850 ನೌಕರರಲ್ಲಿ ಕೇವಲ 10 ಮಂದಿ ನೌಕರರಿಗೂ ವಿಷಯವೇ ತಿಳಿಸಿಲ್ಲ. ಇನ್ನು ಇತರೆ ಯಾವುದೇ ಮಾಹಿತಿಯನ್ನು ವಾಟ್ಸ್‌ಆಪ್ ಗ್ರೂಪ್‌ಗಳ ಮೂಲಕ ಕೊಡುವ ಎಟಿಎಸ್ ರಾಮರೆಡ್ಡಿ ಹಾಗೂ ಟಿಐ ಅಶೋಕ್ ಎಂಬುವರು ಕೌನ್ಸಿಲಿಂಗ್ ಮಾಡುತ್ತಿರುವ ಬಗ್ಗೆ ಮಾಹಿತಿಯನ್ನೇ ಕೊಟ್ಟಿಲ್ಲ.
ಇನ್ನು ನಿನ್ನೆ ಅಂದರೆ ಶನಿವಾರ ಬೆಳಗ್ಗೆ 6.45ರಿಂದ 7.30ರ ವರೆಗೆ ಕೌನ್ಸಿಲಿಂಗ್ ಮಾಡಿದ್ದೇವೆ ಎಂದು ಹೇಳುತ್ತಿರುವ ಈ ಅಧಿಕಾರಿಗಳು ತಮಗೆ ಇಷ್ಟ ಬಂದವರಿಗೆ ಲಂಚ ಕೊಡುವವರಿಗೆ ಫೋನ್ ಮೂಲಕವೇ ಕೌನ್ಸಿಲಿಂಗ್ ಮಾಡಿ ರೂಟ್ ಕೊಟ್ಟಿದ್ದಾರೆ ಎಂಬ ಆರೋಪವನ್ನು ಸೇವಾ ಹಿರಿತನ ಹೊಂದಿರುವ ನೂರಾರು ನೌಕರರು ಮಾಡಿದ್ದಾರೆ.
ಇನ್ನು ಈ ರಾಮರೆಡ್ಡಿ, ಅಶೋಕ್ ಅವರು ತಮ್ಮ ಜತೆಗೆ ಎಣ್ಣೆ ಪಾರ್ಟಿ ಮಾಡಲು ಬರುವ ನೌಕರರಿಗೆ ಹಾಗೂ ಕಬಾಬು ತಂದು ಕೊಡುವ ನೌಕರರಿಗೆ ಅವರು ಕೇಳಿದ ರೂಟ್ ಮತ್ತು ಯಾವಾಗ ಬೇಕೆಂದರೆ ಅವಾಗ ರಜೆ ಕೊಡುತ್ತಾರೆ. ನಾವು ಕಷ್ಟಪಟ್ಟು ಡ್ಯೂಟಿ ಮಾಡಿ ವಾರದ ಮತ್ತು ಇತರೆ ರಜೆ ಪಡೆಯಬೇಕು ಎಂದರೂ ಹಿಂಸೆಕೊಡುತ್ತಾರೆ ಎಂದು ಆರೋಪಿಸಿದ್ದಾರೆ.
ಅಲ್ಲದೆ ಟಿಸಿ ಎಸ್.ಜೆ.ಮೇಟಿ ಎಂಬಾತ ಚಾಲನಾ ಸಿಬ್ಬಂದಿಗಳಿಗೆ ಇರುವ ರೊಟೇಷನ್ ರೂಟ್‌ಅನ್ನೇ ತನಗೆ ಬೇಕಾದವರಿಗೆ ಕೊಡುತ್ತಾನೆ. ನಮ್ಮ ರೊಟೇಷನ್ ರೂಟ್‌ಅನ್ನು ಬೇರೆಯವರಿಗೆ ಏಕೆ ಕೊಟ್ಟಿದ್ದೀರಿ ಎಂದು ಕೇಳಿದರೆ ನೀನು ತಡವಾಗಿ ಬಂದಿದ್ದೀಯೆ ಅದಕ್ಕೆ ನಾನು ಕೊಟ್ಟುಕಳಿಸಿದ್ದೇನೆ ನಾಳೆ ಬಾ ಅದೇ ರೂಟ್ ಮಾಡು ಎಂದು ನೌಕರರಿಗೆ ದಮ್ಕಿ ಹಾಕುತ್ತಾನೆ ಎಂಬ ಆರೋಪ ಕೇಳಿ ಬಂದಿದೆ.
ಇತ್ತ 13ನೇ ಘಟಕದಲ್ಲಿ ಘಟಕ ವ್ಯವಸ್ಥಾಪಕರು ತಿಂಗಳಲ್ಲಿ ಕನಿಷ್ಠ ಒಂದುವಾರವಾದರೂ ರಜೆ ಮೇಲೆ ಇರುತ್ತಾರೆ. ನಾವು ನಮಗೆ ಆಗುತ್ತಿರುವ ತೊಂದರೆ ಹೇಳಿಕೊಳ್ಳಲು ಹೋದರೂ ಅವರು ಸಿಗುವುದಿಲ್ಲ ಎಂಬ ಆರೋಪ ಘಟಕ ವ್ಯವಸ್ಥಾಪಕರ ಮೇಲಿದೆ. ಹೀಗೆ ಬಿಎಂಟಿಸಿ 13ನೇ ವೋಲ್ವೋ ಘಟಕದಲ್ಲಿ ಇರುವ ಎಟಿಎಸ್, ಟಿಐ ಹಾಗೂ ಟಿಸಿ ಇವರು ಕೊಡುತ್ತಿರುವ ಕಿರುಕುಳದಿಂದ ನೌಕರರು ಭಾರಿ ಮನನೊಂದುಕೊಂಡೇ ಡ್ಯೂಟಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೀಗಾಗಿ ಈ ಮೂವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡು ಅಮಾನತು ಮಾಡಬೇಕು. ಇಲ್ಲ ಬೇರೆ ಕಡೆ ವರ್ಗಾವಣೆ ಮಾಡಿದರೆ ನೌಕರರಿಗೆ ಸಂಬಂಧಿಸದ ಸ್ಥಳಗಳಿಗೆ ವರ್ಗಾವಣೆ ಮಾಡಿ. ಏಕೆಂದರೆ ಇವರಿಂದ ನೌಕರರು ನೆಮ್ಮದಿಕಳೆದುಕೊಂಡು ಒತ್ತಡದಲ್ಲೇ ಡ್ಯೂಟಿ ಮಾಡಬೇಕಾಗುತ್ತದೆ. ಹೀಗೆ ಮಾಡಿದರೆ ಅಪಘಾತಗಳು ಆಗುವ ಸಂದರ್ಭಗಳೇ ಹೆಚ್ಚು ಎಂದು ನೌಕರರು ಡಿಸಿ ಅವರಲ್ಲಿ ಮನವಿ ಮಾಡಿದ್ದಾರೆ.
ಅಲ್ಲದೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ರಾಮಚಂದ್ರನ್ ಅವರ ಬಳಿ ಈ ಸಂಬಂಧ ಸಮಸ್ಯೆಯನ್ನು ಹೇಳಿಕೊಳ್ಳಲು ಹೋದರೆ ಅಂಥ ನೌಕರರನ್ನು ಅವರ ಬಳಿ ಬಿಡುತ್ತಿಲ್ಲ ಎಂಬ ಆರೋಪ ಕೂಡ ಕೇಳಿ ಬಂದಿದೆ. ಹೀಗಾಗಿ ಎಂಡಿ ಅವರು ಈ ಘಟಕದಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
Related
