ಬೆಂಗಳೂರು: ರಾಜ್ಯದಲ್ಲಿ ಶಾಲೆಗಳು ಇಂದಿನಿಂದ ಆರಂಭವಾಗಿರುವ ಹಿನ್ನೆಲೆಯಲ್ಲಿ ಈವರೆಗೂ ರಜೆಯಲ್ಲಿದ್ದ ವಿದ್ಯಾರ್ಥಿಗಳು ಮರಳಿ ಶಾಲೆಗೆ ಹೋಗುವುದಕ್ಕೆ ಹೊಸ ಬಸ್ಪಾಸ್ ಮಾಡಿಸಿಕೊಳ್ಳಬೇಕು. ಆದರೆ, ಅದು ತಕ್ಷಣಕ್ಕೆ ಆಗುವುದಿಲ್ಲ ಹೀಗಾಗಿ ಜೂನ್ 15ರ ವರೆಗೂ ಹಳೆಯ ಬಸ್ಪಾಸ್ನಲ್ಲೇ ಅಥವಾ ಪ್ರಸಕ್ತ ವರ್ಷದ ಶಾಲಾ ಶುಲ್ಕ ರಸೀದಿ ತೋರಿಸಿ ಶಾಲೆಗೆ ಹೋಗುವುದಕ್ಕೆ ಸಾರಿಗೆ ನಿಗಮ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದೆ.
ಕರ್ನಾಟಕದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಬುಧವಾರದಿಂದ ಓಪನ್ಆಗಿವೆ ಹೀಗಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ತರಗತಿಗಳಿಗೆ ಹಾಜರಾಗಲು ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಈ ಕ್ರಮ ಕೈಗೊಂಡು ಸುತ್ತೋಲೆಯನ್ನು ಹೊರಡಿಸಿದೆ.
ವಿದ್ಯಾರ್ಥಿಗಳ ಹಳೆಯ ಬಸ್ಪಾಸ್ ಅವಧಿಯನ್ನು ವಿಸ್ತರಿಸಿದ್ದು, ಜೂನ್ 15ರ ವರೆಗೂ ಕೆಎಸ್ಆರ್ಟಿಸಿ ಬಸ್ನಲ್ಲಿ ಓಡಾಡಬಹುದು ಎಂದು ಸಂಸ್ಥೆ ಆದೇಶ ಹೊರಡಿಸಿದೆ. ಇದು ಇಂದಿನಿಂದಲೇ ಜಾರಿಗೆ ಬಂದಿದ್ದು, ಹಳೆ ಬಸ್ಪಾಸ್ ಹೊಂದಿರುವ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದೆ.
ಇದರ ಜತೆಗೆ ಹೊಸದಾಗಿ ಬೇರೆಕಡೆ ಶಾಲೆಗೆ ಸೇರಿರುವ ವಿದ್ಯಾರ್ಥಿಗಳು ಪ್ರಸಕ್ತ ವರ್ಷದ ಶಾಲಾ ಶುಲ್ಕ ರಸೀದಿ ತೋರಿಸಿಯೂ ಪ್ರಯಾಣ ಮಾಡಬಹುದು ಎಂದು ಕೆಎಸ್ಆರ್ಟಿಸಿ ತನ್ನ ಆದೇಶದಲ್ಲಿ ತಿಳಿಸಿದೆ.
ಕರ್ನಾಟಕ ರಾಜ್ಯ ರ್ಸತೆ ಸಾರಿಗೆ ನಿಗಮವು ಪ್ರತಿ 2023-24ನೇ ಸಾಲಿನ ವಿದ್ಯಾರ್ಥಿ ಉಚಿತ ರಿಯಾಯಿತಿ ಬಸ್ ಪಾಸುಗಳನ್ನು ಇಡಿಸಿಎಸ್ ಇಲಾಖೆಯ ಸೇವಾಸಿಂಧು ತಂತ್ರಾಂಶದ ಮುಖಾಂತರ ಸಂಪೂರ್ಣ ಯಾಂತ್ರೀಕೃತವಾಗಿ ವಿತರಣೆ ಮಾಡಲು ಕ್ರಮವಹಿಸಿಲಾಗುತ್ತಿದ್ದು, ಇಡಿಸಿಎಸ್ ಇಲಾಖೆಯು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಹೀಗಾಗಿ ವಿದ್ಯಾರ್ಥಿಗಳಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಕೆಗೆ ಹಾಗೂ ಪಾಸ್ ಪಡೆಯಲು ಕಾಲಾವಕಾಶ ನೀಡಬೇಕಿದೆ. ಜತೆಗೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕೆ ತರಗತಿಗಳಿಗೆ ಹಾಜರಾಗಲು ಯಾವುದೇ ಅನಾನುಕೂಲವಾಗದಂತೆ ಕ್ರಮವಹಿಸಬೇಕಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನಿರ್ದೇಶಕರು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.