ಕೆಂಜಾಳ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸೊಂದಕ್ಕೆ ಕಾಡಾನೆ ದಾಳಿ ಮಾಡಿ ಜಖಂಗೊಳಿಸಿರುವ ಘಟನೆ ಮಂಗಳೂರು ಜಿಲ್ಲೆಯ ಕೆಂಜಾಳ ಸಮೀಪ ತಡರಾತ್ರಿ ನಡೆದಿದೆ.
ಪುತ್ತೂರಿಂದ ಬೆಂಗಳೂರಿಗೆ ಗುರುವಾರ ತಡರಾತ್ರಿ ತೆರಳುತ್ತಿದ್ದ ಕೆಎಸ್‍ಆರ್‌ಟಿಸಿ ಸ್ಲೀಪರ್ ಕೋಚ್ ಬಸ್‌ಗೆ ಕಾಡಾನೆ ದಂತದಿಂದ ತಿವಿದೆ. ಇದರಿಂದ ಬಸ್‌ನ ಬಾಡಿ ಮಧ್ಯಭಾಗದ ಸಮೀಪ ಕಿತ್ತುಹೋಗಿದೆ.
ಸುಬ್ರಹ್ಮಣ್ಯ-ಗುಂಡ್ಯ ರಾಜ್ಯ ಹೆದ್ದಾರಿಯ ಕೆಂಜಾಳ ಸಮೀಪ ಕಾಡಾನೆ ದಾಳಿ ಮಾಡಿದರೂ ಬಸ್‌ನಲ್ಲಿ ಪ್ರಯಾಣಿಕರಿಗೆ ಏನು ತೊಂದರೆ ಮಾಡಿಲ್ಲ. ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಸಾರಿಗೆ ಸಿಬ್ಬಂದಿ ತಿಳಿಸಿದರು.
ಬಸ್ ಪುತ್ತೂರಿನಿಂದ ಕಾಣಿಯೂರು ಮಾರ್ಗವಾಗಿ ಸುಬ್ರಹ್ಮಣ್ಯ ಮೂಲಕ ಬೆಂಗಳೂರಿಗೆ ತೆರಳುತ್ತಿತ್ತು. ಬಸ್ ಚಾಲಕ ರಸ್ತೆ ಬದಿ ನಿಂತಿದ್ದ ಕಾಡಾನೆ ಗಮನಿಸಿ ಅದನ್ನು ತಪ್ಪಿಸಲು ಯತ್ನಿಸಿದ್ದಾರೆ. ಆದರೂ ಬಸ್‌ನ ಎಡಭಾಗಕ್ಕೆ ಆನೆ ತನ್ನ ದಂತದಿಂದ ತಿವಿದಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಸಂಭವಿಸುತ್ತಿದ್ದ ಭಾರಿ ಅನಾಹುತ ತಪ್ಪಿದಂತಾಗಿದೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಭೇಟಿ, ಪರಿಶೀಲನೆ ನೀಡಿಸಿದ್ದಾರೆ. ಆ ಬಳಿಕ ಬಸ್ ಬೆಂಗಳೂರಿನತ್ತ ತೆರಳಿದೆ.