ಧಾರವಾಡ: ಇದೇ ಜೂನ್ 7ರಂದು ಮದುವೆಯಾಗಬೇಕಿದ್ದ ಯುವಕನನ್ನು ಯಾರೋ ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಕಲಘಟಗಿ ತಾಲೂಕಿನ ಜಿನ್ನೂರ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ಜಿನ್ನೂರ ಗ್ರಾಮದ ನಿಂಗಪ್ಪ ಬೂದಪ್ಪ ನವಲೂರ (28) ಹತ್ಯೆಯಾದ ಯುವಕ. ಪಾಪಿಗಳ ದಾಳಿಗೆ ಒಳಗಾಗಿದ್ದರಿಂದ ಇನ್ನೂ 6 ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವಕ ಭೀಕರವಾಗಿ ಕೊಲೆಯಾಗಿ ಮಸಣಕ್ಕೆ ಸೇರಿರುವುದಕ್ಕೆ ಗ್ರಾಮದಲ್ಲಿ ಸೂತಕದ ಛಾಯೆ ಮನೆ ಮಾಡಿದೆ.
ಮೃತ ಯುವಕನಿಗೆ ಜೂನ್ 7 ರಂದು ತಾವರಗೇರೆ ಗ್ರಾಮದ ಯುವತಿ ಜೊತೆ ಮದುವೆ ನಿಶ್ಚಿಯವಾಗಿತ್ತು. ನಿಂಗಪ್ಪ ತೋಟದ ಮನೆಯಲ್ಲಿದ್ದಾಗ ಮಧ್ಯರಾತ್ರಿ ದಾಳಿ ಮಾಡಿದ ದುಷ್ಕರ್ಮಿಗಳು ಕಣ್ಣಿಗೆ ಖಾರದ ಪುಡಿ ಎರಚಿ, ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಸ್ಥಳಕ್ಕೆ ಕಲಘಟಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕೊಲೆಗಾರರ ಪತ್ತೆಗೆ ಬಲೆ ಬೀಸಿದ್ದಾರೆ.