ಮಂಡ್ಯ : ಜಿಲ್ಲೆಯ ಪಾಂಡವಪುರ ತಾಲೂಕಿನ ಜಕ್ಕನಹಳ್ಳಿ ಕ್ರಾಸ್ ಸಮೀಪ ಫುಲ್ ರಶ್ ಆಗಿದ್ದ ಚಲಿಸುತ್ತಿದ್ದ ಬಸ್‌ನಿಂದ ಬಿದ್ದು ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ.
ಹರಕನಕೆರೆ ಗ್ರಾಮದ ನಿವಾಸಿ ಚಲುವೇಗೌಡ (75) ಮೃತರು. ಚಲುವೇಗೌಡ ಬಸ್ ರಶ್ ಇದ್ದ ಕಾರಣ ಬಾಗಿಲ ಬಳಿ ನಿಂತಿದ್ದರು. ರಸ್ತೆಯಲ್ಲಿನ ಗುಂಡಿಗೆ ಬಸ್ ಇಳಿಯುತ್ತಿದ್ದಂತೆ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ. ಬಸ್‌ನಿಂದ ಬಿದ್ದ ರಭಸಕ್ಕೆ ತಲೆಗೆ ಪೆಟ್ಟು ಬಿದ್ದಿದೆ. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಅಸುನೀಗಿದ್ದಾರೆ.
ಅಪಘಾತವಾದ ಬಳಿಕ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದುರ್ಘಟನೆ ಸಂಭವಿಸಲು ಬಸ್ನಲ್ಲಿ ಡೋರ್ ಇಲ್ಲದಿರುವುದು. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಬರುವವರೆಗೆ ಬಸ್ ಬಿಡಲ್ಲ ಎಂದು ಸಾರ್ವಜನಿಕರು ಪಟ್ಟು ಹಿಡಿದಿದ್ದರು.
ಸ್ಥಳಕ್ಕೆ ಬಂದ ಅಧಿಕಾರಿಯನ್ನು ತರಾಟೆ ತೆಗೆದುಕೊಂಡಿದ್ದಾರೆ. ಬಾಗಿಲು ಇಲ್ಲದ ಬಸ್ ಸಂಚಾರಕ್ಕೆ ಬಿಟ್ಟಿದ್ದು ಯಾಕೆ ಎಂದು ಪ್ರಶದನಿಸಿದ್ದು, RTOಯಿಂದ ಬಾಗಿಲಿಲ್ಲದ ಬಸ್ ಸಂಚಾರಕ್ಕೆ ಆನುಮತಿ ಕೊಟ್ಟಿದ್ದಾರಾ? ಈ ದುರ್ಘಟನೆಗೆ ಯಾರು ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೇಲುಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಜನರ ಆಕ್ರೋಶ ನೋಡಿ ಕೆಎಸ್‌ಆರ್‌ಟಿಸಿಯದ್ದೇ ತಪ್ಪೆಂದು ಒಪ್ಪಿಕೊಂಡ ಅಧಿಕಾರಿ, ನಿಗಮದಿಂದ 2.5 ಲಕ್ಷ ರೂ. ಪರಿಹಾರ ನೀಡುವ ಭರವಸೆ ನೀಡಿದರು. ಜತೆಗೆ, ಸ್ಥಳದಲ್ಲೇ 25 ಸಾವಿರ ರೂ. ಪರಿಹಾರ ನೀಡಿದ ಬಳಿಕ ಬಸ್ ಬಿಟ್ಟುಕಳುಹಿಸಿದ್ದಾರೆ.
ಮಹಿಳೆಯರಿಗೆ ಉಚಿತ ಬಸ್ ಸೇವೆ ಒದಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ ರಾಜ್ಯದಾದ್ಯಂತ ವ್ಯಾಪಕ ಸ್ಪಂದನೆ ವ್ಯಕ್ತವಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಯಾಣ ಮಾಡುತ್ತಿದ್ದಾರೆ. ಶಕ್ತಿ ಯೋಜನೆ ಹಿನ್ನೆಲೆ ಬಸ್ ಸಾಕಷ್ಟು ಭರ್ತಿಯಾಗಿ ಸಂಚರಿಸುತ್ತಿವೆ. ನಿಲ್ದಾಣಗಳಲ್ಲಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಸ್‌ಗಳಲ್ಲಿ ನೂಕುನುಗ್ಗಲು, ಕಾಲಿಡಲೂ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.