ಮೈಸೂರು: ನರಸೀಪುರ – ನಂಜನಗೂಡು ಮುಖ್ಯ ರಸ್ತೆಯ ಬಸವನಪುರ ಬಳಿ ಕೆಎಸ್ಆರ್ಟಿಸಿ ಬಸ್ ಹಾಗೂ ಐಷರ್ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಮಹಿಳೆಯರ ಕೈಗಳು ಕಟ್ಟಾದ್ದು, ಮೂವರಿಗೆ ಗಂಭೀರ ಗಾಯಗಳಾಗಿರುವೆ.
ನಂಜನಗೂಡು ತಾಲೂಕಿನ ಬಸವನಪುರ ಗ್ರಾಮದ ಸೇತುವೆ ಬಳಿ ಬುಧವಾರ (ಜೂನ್ 21) ಅವಘಡ ಸಂಭವಿಸಿದ್ದು, ಗುಂಡ್ಲುಪೇಟೆ ತಾಲೂಕಿನ ತೊಂಡವಾಡಿ ಗ್ರಾಮದ ರಾಜಮ್ಮ (60), ಶಾಂತಕುಮಾರಿ (52) ಹಾಗೂ ಸರಗೂರು ಗ್ರಾಮದ ಮಿಣ್ಣ ನಾಯಕ (50) ಗಾಯಗೊಂಡಿದ್ದಾರೆ.
ಐಷರ್ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಬಸ್ ಮುಂದಿನ ಸೀಟಿನಲ್ಲಿ ಕುಳಿತಿದ್ದ ಈ ಮೂವರು ಮಹಿಳೆಯರಿಗೆ ಗಂಭೀರ ಗಾಯಗಳಾಗಿದ್ದು, ಅವರಲ್ಲಿ ಇಬ್ಬರು ಮಹಿಳೆಯರ ಕೈಗಳು ತಂಡಾಗಿವೆ.
ಐಷರ್ ವಾಹನ ಚಾಲಕನ ಅಜಾಗರೂಕತೆಯ ಚಾಲನೆಯೇ ಇದಕ್ಕೆ ಕಾರಣ ಎಂದು ರೊಚ್ಚಿಗೆದ್ದ ಸಾರ್ವಜನಿಕರು ಚಾಲಕನನ್ನು ಹಿಡಿದು ಥಳಿಸಿದ್ದಾರೆ.
ನಂಜನಗೂಡಿನಿಂದ ತಿ.ನರಸೀಪುರ ಕಡೆಗೆ ಸಾರಿಗೆ ಬಸ್ ಹೊರಟಿತ್ತು ಎದುರಿಂದ ಐಷರ್ ವಾಹನ ಭತ್ತ ಕಟಾವುಮಾಡುವ ಯಂತ್ರ ಹೊತ್ತುಕೊಂಡು ಬರುತ್ತಿತ್ತು. ಐಷರ್ ವಾಹನ ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಮಾಡಿದ್ದೇ ಈ ಅವಘಡಕ್ಕೆ ಕಾರಣ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನಂಜನಗೂಡು ಡಿವೈಎಸ್ಪಿ ಗೋವಿಂದರಾಜು, ಸರ್ಕಲ್ ಇನ್ಸ್ಪೆ ಕ್ಟ ರ್ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೂವರು ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದೆ. ಸಾರಿಗೆ ಬಸ್ ಮತ್ತು ಐಷರ್ ವಾಹನವನ್ನು ಬಿಳಿಗೆರೆ ಪೊಲೀಸ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.