ವಿಜಯಪುರ: ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನ ಅಥವಾ ವೇತನ ಆಯೋಗ ಮಾದರಿ ಸಂಬಳಕೊಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗುವುದು ಎಂದು ಜವಳಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ (ಜೂನ್ 23) ಸಚಿವರನ್ನು ಭೇಟಿ ಮಾಡಿದ ಸಾರಿಗೆ ನೌಕರರು ಶಿವಾನಂದ ಪಾಟೀಲ್ ಅವರನ್ನು ಸನ್ಮಾನಿಸಿದರು.
ಈ ವೇಳೆ ಸಚಿವರಲ್ಲಿ ಮನವಿ ಮಾಡಿದ ನೌಕರರು, ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಾರಿಗೆ ನೌಕರರಿಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ 6ನೇ ವೇತನ ಅಥವಾ ಸರಿಸಮಾನ ವೇತನ ಜಾರಿ ಮಾಡುವಂತೆ ಒತ್ತಾಯಿಸಿದರು.
ನೌಕರರ ಬೇಡಿಕೆಗೆ ಸ್ಪಂದಿಸಿದ ಸಚಿವ ಶಿವಾನಂದ ಪಾಟೀಲ್ ಈ ಸಂಬಂಧ ಮುಖ್ಯಮಂತ್ರಿಗಳ ಜತೆಗೆ ಮಾತನಾಡಿ ಶೀಘ್ರದಲ್ಲೇ ಈಡೇರಿಸಲು ಕ್ರಮ ಕೊಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕಳೆದ ಬಾರಿ ಬಿಜೆಪಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಲಕ್ಷ್ಮಣ ಸವದಿ ಮತ್ತು ಬಿ.ಶ್ರೀರಾಮುಲು ಅವರು ಇದೇ ರೀತಿ ಭರವಸೆ ನೀಡಿ ಕಾಲ ಕಳೆದುಕೊಂಡು ಹೋದರು. ಯಾವುದೇ ಭರವಸೆ ಈಡೇರಿಸಲಿಲ್ಲ. ಹೀಗಾಗಿ ತಾವು ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಂತೆ ನಮಗೆ ವೇತನ ನೀಡಬೇಕು. ಈ ಬಗ್ಗೆ ತಾವು ನಮಗೆ ಧ್ವನಿಯಾಗಬೇಕು ಎಂದು ಒತ್ತಾಯಿಸಿದರು.
ಇನ್ನು ಬಿಜೆಪಿ ಸರ್ಕಾರದಂತೆ ನೀವು ಜಾರಿಕೊಳ್ಳುವ ಪ್ರಯತ್ನ ಮಾಡಬೇಡಿ ನಮ್ಮ ಕಷ್ಟದ ಬಗ್ಗೆ ನಿಮಗೆ ಅರಿವಿದೆ. ಹೀಗಾಗಿ ನಿಮ್ಮ ಸರ್ಕಾರದಲ್ಲಿ ನಮಗೆ ಆಗುತ್ತಿರುವ ವೇತನ ತಾರತಮ್ಯತೆಯನ್ನು ಸರಿಪಡಿಸಿ ಎಂದು ಮನವಿ ಮಾಡಿದರು.