ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡದಲ್ಲಿ ನಿರ್ವಾಹಕರ ಮೇಲೆ ಹಲ್ಲೆ ಮಾಡಿದ ಮೂವರು ಮಹಿಳಾ ಪ್ರಯಾಣಿಕರು ಸೇರಿದಂತೆ ನಾಲ್ವರ ವಿರುದ್ಧ ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ಜೂನ್ 23ರಂದು ಮಹಿಳಾ ಪ್ರಯಾಣಿಕರ ಗುಂಪೊಂದು ನಿರ್ವಾಹಕನಿಗೆ ಅವಾಚ್ಯ ಶಬ್ದ ಪ್ರಯೋಗ ಮಾಡಿದ್ದು ಅಲ್ಲದೆ ಕಾಲಿನಿಂದ ಒದ್ದು ಬಸ್ ಫುಟ್‌ಬೋರ್ಡ್‌ನಿಂದ ಬೀಳಿಸಿದ್ದರು. ಈ ಸಂಬಂಧ ನಿರ್ವಾಹಕ ಬಸವರಾಜ ಅವರು ಸವದತ್ತಿ ಪೊಲೀಸ್ ಠಾಣೆಯಲ್ಲಿ ಮೂವರು ಮಹಿಳೆಯರು ಮತ್ತು ಒಬ್ಬ ಪುರುಷನ ವಿರುದ್ಧ ದೂರು ನೀಡಿದ್ದು, ನಿರ್ವಾಹಕ ನೀಡಿರುವ ದೂರಿನ ಮೇರೆಗೆ ಐಪಿಸಿ 1860, 353, 323, 504, 109, 34ರಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.
ಅಂದು ನಡೆದ ಗಲಾಟೆಯಲ್ಲಿ ಆ ಮಹಿಳೆಯರು ನಿರ್ವಾಹಕನಿಗೆ ಥಳಿಸಿದ್ದರು. ಜತೆಗೆ ಕುತ್ತಿಗೆ ಪಟ್ಟಿಯನ್ನು ಹಿಡಿದು ಹೊಡೆದಿದ್ದರು. ಹೀಗೆ ಪ್ರಯಾಣಿಕರು ನಡೆದುಕೊಂಡರೆ ಸಾರಿಗೆ ಸಿಬ್ಬಂದಿ ಡ್ಯೂಟಿ ಮಾಡುವುದಾದರೂ ಹೇಗೆ ಎಂದು ಭಯದಲ್ಲೇ ಅಮಾಯಕ ನೌಕರರು ತಿಳಿಸಿದ್ದರು.
ಇನ್ನು ಸರ್ಕಾರ ಮಹಿಳೆಯರಿಗೆ ರಾಜ್ಯದ ಎಲ್ಲ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಎಲ್ಲಿಂದ ಎಲ್ಲಿಯವರೆಗೂ ಬೇಕಾದರೂ ಉಚಿತವಾಗಿ ಪ್ರಯಾಣಿಸುವುದಕ್ಕೆ ಅವಕಾಶ ಕಲ್ಪಿಸಿದೆ. ಆದರೆ, ಇದರ ಸದುಪಯೋಗ ಪಡೆದುಕೊಳ್ಳುವುದಕ್ಕಿಂತ ಹೆಚ್ಚಾಗಿ ನೌಕರರ ಮೇಲೆ ದೌರ್ಜನ್ಯ ಎಸಗುವವರೆ ಹೆಚ್ಚಾಗುತ್ತಿದ್ದಾರೆ.
ಸಾರಿಗೆ ನಿಗಮಗಳ ಚಾಲನಾ ಸಿಬ್ಬಂದಿಯ ಮೇಲೆ ಹಲ್ಲೆ ಮಾಡುವುದು, ಅವಾಚ್ಯವಾಗಿ ನಿಂದಿಸುವುದು, ಬಸ್ ಡೋರ್‌ಗಳನ್ನು ಮುರಿಯುವುದು ಇತ್ತೀಚೆಗೆ ಹೆಚ್ಚಾಗಿಯೇ ನಡೆಯುತ್ತಿದೆ. ಆದರೆ, ಪ್ರಯಾಣಿಕ ಮಹಿಳೆಯರಿಗೆ ಅರಿವು ಮೂಡಿಸಬೇಕಿರುವ ನಿಗಮಗಳ ಅಧಿಕಾರಿಗಳು ಆ ಕೆಲಸ ಮಾಡದೆ ಸಿಬ್ಬಂದಿಗೆ ಶಿಸ್ತು ಕ್ರಮದ ಎಚ್ಚರಿಕೆ ನೀಡುತ್ತಿದ್ದರು.
ಆದರೆ, ಈಗ ತಪ್ಪು ಮಾಡಿದವರಿಗೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗುತ್ತದೆ ಎಂದು ನಿಗಮಗಳ ಅಧಿಕಾರಿಗಳು ಪ್ರಯಾಣಿಕರಿಗೂ ಈ ಮಹಿಳೆಯರ ವಿರುದ್ಧ ಎಫ್‌ಐಆರ್ ದಾಖಲಿಸುವ ಮೂಲಕ ಎಚ್ಚರಿಕೆ ನೀಡಿದ್ದಾರೆ. ಇಲ್ಲಿ ಪ್ರಯಾಣಿಕರೆ ತಪ್ಪು ಮಾಡಿದರೂ ಶಿಕ್ಷೆ ಮಾತ್ರ ಸಾರಿಗೆ ನೌಕರರಿಗೆ ಎಂದು ನೊಂದುಕೊಳ್ಳುತ್ತಿದ್ದ ನೌಕರರಿಗೆ ಅಧಿಕಾರಿಗಳ ಈ ನಡೆಯಿಂದ ಖುಷಿಯಾಗುತ್ತದೆ. ಇದನ್ನು ಸ್ವತಃ ನೌಕರರೆ ಹೇಳಿಕೊಂಡಿದ್ದಾರೆ.
ಇನ್ನು ಸಾರ್ವಜನಿಕರಾರೆ ಆಗಲಿ ಡ್ಯೂಟಿ ಮೇಲೆ ಇರುವ ನೌಕರರಿಗೆ ಹಲ್ಲೆ ಮಾಡುವುದು ಅಪರಾಧವಾಗುತ್ತದೆ. ಅದರ ಅರಿವು ಇದ್ದೋ ಇಲ್ಲದೆಯೋ ಈ ರೀತಿ ನಡೆದುಕೊಂಡರೆ ಅವರಿಗೆ ಕಾನೂನಿನಡಿ ಕ್ಷಮೆ ಇರುವುದಿಲ್ಲ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ಸಂದೇಶವನ್ನು ಸಾರಿಗೆ ಅಧಿಕಾರಿಗಳು ಈ ಮೂಲಕ ನೀಡಿದ್ದಾರೆ.
ಹೀಗಾಗಿ ಯಾವುದೇ ಪ್ರಯಾಣಿಕರು ಸಾರಿಗೆ ನೌಕರರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳದೆ ತಾವು ಎಲ್ಲಿಗೆ ಹೋಗಬೇಕೋ ಆ ಸ್ಥಳವನ್ನು ಹೇಳಿಕೊಂಡು ಅವರಿಗೆ ಸಾಥ್ ನೀಡಿ. ಇದರಿಂದ ನಿಮ್ಮ ಪ್ರಯಾಣವು ಸುಖಕರವಾಗಿರುತ್ತದೆ ಜತೆಗೆ ನಮ್ಮ ನೌಕರರಿಗೂ ನಿಮ್ಮ ಸೇವೆ ಮಾಡುವುದಕ್ಕೆ ಇನ್ನಷ್ಟು ಶಕ್ತಿ ಬರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.