ಮೈಸೂರು: ಜಿಲ್ಲೆಯ ಬನ್ನೂರು ಹೋಬಳಿಯ ಸುತ್ತ ಮುತ್ತಲ ಗ್ರಾಮೀಣ ಭಾಗದಿಂದ ಬನ್ನೂರು, ಸಂತೇಮಾಳದ ಶಾಲೆ- ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಸಮರ್ಪಕವಾದ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ.
ಮಳವಳ್ಳಿ- ಮೈಸೂರು, ತಿ.ನರಸೀಪುರ- ಮಂಡ್ಯ, ಬನ್ನೂರು ಶ್ರೀರಂಗಪಟ್ಟಣ ಮಾರ್ಗದಲ್ಲಿ ಸಮಯಕ್ಕೆ ಸರಿಯಾಗಿ ಬಸ್ಗಳಿಲ್ಲದಿರುವುದರಿಂದ ನಿತ್ಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಯಾತನೆ ಅನುಭವಿಸುತ್ತಿದ್ದಾರೆ.
ಇದರಿಂದ ಸಮಯಕ್ಕೆ ಸರಿಯಾಗಿ ಶಾಲೆಗೆ ಹೋಗುವುದಕ್ಕೂ ಆಗುತ್ತಿಲ್ಲ ಮತ್ತೆ ಮನೆ ಸೇರುವುದಕ್ಕೂ ಆಗುತ್ತಿಲ್ಲ. ಇನ್ನು ಬರುವ ಬಸ್ಗಳಿಗೆ ಹತ್ತಲು ಹರ ಸಾಹಸ ಪಡುವಂತಾಗಿದೆ. ಹೀಗಿದ್ದರೂ ಈ ವಿದ್ಯಾರ್ಥಿಗಳ ಗೋಳು ಕೇಳುವವರಿಲ್ಲ. ಇಷ್ಟಲ್ಲ ಸಮಸ್ಯೆಗಳನ್ನು ಸ್ಥಳೀಯ ಜನ ಪ್ರತಿನಿಧಿಗಳು ಕಂಡರೂ ಕಾಣದಂತೆ ಕೈಕಟ್ಟಿ ಮೂಕ ಪ್ರೇಕ್ಷಕರಾಗಿದ್ದಾರೆ.
ಇಂದಿನ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಮಹಿಳೆಯರಿಗಾಗಿಯೇ ಶಕ್ತಿ ಯೋಜನೆ ಜಾರಿ ಮಾಡಿದ್ದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮಾಡಲು ಅವಕಾಶ ನೀಡಿದೆ. ಮಹಿಳೆಯರು ಹೆಚ್ಚು ಪ್ರಯಾಣ ಮಾಡುತ್ತಿರುವುದು ವಿಶೇಷವಾಗಿದೆ. ಆದರೆ, ಸಮಯಕ್ಕೆ ಸರಿಯಾಗಿ ಬಸ್ಗಳ ಸೇವೆ ಇಲ್ಲದೆ ಶಾಲೆ ಕಾಲೇಜು ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ.
ಇನ್ನು ಇತ್ತ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಬೇಕಾದ ಕೆಎಸ್ಆರ್ಟಿಸಿ ಇರುವ ಬಸ್ಗಳ ಸಂಖ್ಯೆಯನ್ನೇ ಕಡಿಮೆ ಮಾಡಿದೆ. ಇದು ಇನ್ನಷ್ಟು ಸಮಸ್ಯೆ ಸೃಷ್ಟಿಗೆ ಕಾರಣವಾಗಿದೆ.
ಕ್ರಮಕ್ಕೆ ಆಗ್ರಹ: ತಿ.ನರಸೀಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ ಅವರು ಇತ್ತ ಗಮನ ಹರಿಸಿ ಬಸ್ಗಳು ಸಮಯಕ್ಕೆ ಸರಿಯಾಗಿ ಬರುವಂತೆ ಮತ್ತು ಹೆಚ್ಚು ಬಸ್ಗಳ ವ್ಯವಸ್ಥೆ ಮಾಡಬೇಕೆಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಆಗ್ರಹಿಸಿದ್ದಾರೆ.