ಬೆಂಗಳೂರು: ನಾಲ್ಕು ತಿಂಗಳ ವೇತನ, ಮೂರು ವರ್ಷದ ಅರಿಯರ್ಸ್ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜುಲೈ 8ರಂದು 108 ಆಂಬುಲೆನ್ಸ್ ಚಾಲಕರು, ಸ್ಟಾಫ್‌ನರ್ಸ್ ಹಾಗೂ ಸಿಬ್ಬಂದಿಗಳು ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಅಂದು ಸರ್ಕಾರಿ ಆಂಬುಲೆನ್ಸ್ಗಳ ಕಾರ್ಯ ಸ್ಥಗಿತವಾಗಲಿದೆ.
ಎಲ್ಲಾದರೂ ಪ್ರತಿಭಟನೆ ನಡೆದರು ತುರ್ತು ಚಿಕಿತ್ಸೆ ನೀಡುವ ಸಲುವಾಗಿ ಹೋಗಿ ನಿಲ್ಲುತ್ತಿದ್ದ ಆಂಬುಲೆನ್ಸ್ ವ್ಯವಸ್ಥೆಯೇ ಏಕಾಏಕಿ ನಿಂತಲ್ಲಿ ರಾಜ್ಯದಲ್ಲಿ ಹೆಲ್ತ್ ಎಮರ್ಜೆನ್ಸಿ ಶುರುವಾಗುವ ಆತಂಕ ಎದುರಾಗಿದೆ. ಹೀಗಾಗಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ 108 ಆಂಬುಲೆನ್ಸ್ ಚಾಲಕರು, ಸ್ಟಾಫ್ ನರ್ಸ್ ಹಾಗೂ ಸಿಬ್ಬಂದಿಗಳು ಎಚ್ಚರಿಕೆ ನೀಡಿದ್ದಾರೆ.
ಬೇಡಿಕೆಗಳು?: ಸರ್ಕಾರ ಕಳೆದ ನಾಲ್ಕು ತಿಂಗಳಿಂದ ವೇತನ ಬಿಡುಗಡೆ ಮಾಡಿಲ್ಲ ಹಾಗೂ ಮೂರು ವರ್ಷದ ಅರಿಯರ್ಸ್ ಬಾಕಿ ಇಟ್ಟುಕೊಂಡಿದೆ ಹೀಗಾಗಿ ಅಂದು ಕರ್ತವ್ಯಕ್ಕೆ ಗೈರಾಗಿ ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು 108 ( ಆರೋಗ್ಯ ಕವಚ) ಆಂಬುಲೆನ್ಸ್ ಚಾಲಕರು, ಸ್ಟಾಫ್ ನರ್ಸ್ ಸಿಬ್ಬಂದಿಗಳ ನಿರ್ಧಾರಿಸಿದ್ದಾರೆ.
ರಾಜ್ಯದಲ್ಲಿ ಒಟ್ಟು 2 ಸಾವಿರ ಸ್ಟಾಫ್ ನರ್ಸ್, ಆಂಬುಲೆನ್ಸ್ ಚಾಲಕರಿದ್ದು ಆಂಬುಲೆನ್ಸ್ ಸೇವೆಯನ್ನು ಖಾಸಗಿ ಸಂಸ್ಥೆಯಾದ ಜಿವಿಕೆ ಟೆಂಡರ್ ಮೂಲಕ ನಡೆಸುತ್ತಿದೆ. ಈ ಬಗ್ಗೆ ಮಾತನಾಡಿರುವ ಕೆಲ ಆರೋಗ್ಯ ಇಲಾಖೆಯ ಅಧಿಕಾರಿಗಳು, “ಸರ್ಕಾರ ಅನುದಾನ ನೀಡಿದೆ. ಆದ್ರೆ ಬೇರೆ ಕೆಲಸಕ್ಕೆ ಜಿವಿಕೆ ಸಂಸ್ಥೆ ಬಳಸಿಕೊಂಡಿದೆ” ಎಂದು ಹೇಳುತ್ತಿದ್ದಾರೆ.
ಇನ್ನು ರಾಜ್ಯಾದ್ಯಂತ ಸಾಮೂಹಿಕ ರಜೆ ಹಾಕಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ನೌಕರರು ಮುಂದಾಗಿದ್ದು, ಇನ್ನು 8ದಿನಗಳು ಬಾಕಿ ಇರುವುದರಿಂದ ಅಷ್ಟರೊಳಗೆ ಸರ್ಕಾರ ನೌಕರರ ಸಮಸ್ಯೆ ಆಲಿಸಬೇಕು ಎಂದು ಮನವಿ ಮಾಡಿದ್ದಾರೆ.