ಉಡುಪಿ: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ಜಾರಿಯಿಂದಾಗಿ ಮೂರು ನಾಲ್ಕು ತಿಂಗಳಲ್ಲಿ ಕೆಎಸ್‌ಆರ್‌ಟಿಸಿ ಸ್ಥಗಿತಕೊಳ್ಳುವ ಆತಂಕ ಇದೆ ಎಂದು ಕೇಂದ್ರದ ರಾಜ್ಯ ಕೃಷಿ ಸಚಿವರಾದ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಎಸ್‌ಅರ್‌ಟಿಸಿಗೆ ಬಜೆಟ್‌ನಲ್ಲಿ ವಿಶೇಷ ಅನುದಾನ ಕೊಟ್ಟಿಲ್ಲ. 200 ಯೂನಿಟ್ ಉಚಿತ ವಿದ್ಯುತ್ ಇವತ್ತಿನ ತನಕ ಕಾರ್ಯರೂಪಕ್ಕೆ ಬಂದಿಲ್ಲ. ಗೃಹಲಕ್ಷ್ಮೀ ಮತ್ತು ನಿರುದ್ಯೋಗಿ ಭತ್ಯೆ ಮುಂದೂಡುತ್ತಿದ್ದಾರೆ ಎಂದರು.
ಇನ್ನು ಮೂರು ನಾಲ್ಕು ಯೋಜನೆಗಳಿಗೆ ನೋಂದಣಿ ಪ್ರಕ್ರಿಯೆ ನಡೆಯುತ್ತಿರಬಹುದು. ಆದರೆ ಬಜೆಟ್‌ನಲ್ಲಿ ಎಷ್ಟು ಅನುದಾನ ಇಡಲಾಗಿದೆ ಎಂದು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ಎಲ್ಲ ಗ್ಯಾರಂಟಿ ವಿಚಾರದಲ್ಲಿ ಗೊಂದಲ ಕಾಡುತ್ತಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಕರೆದಿರುವ ಅಕ್ಕಿ ಟೆಂಡರ್‌ನಲ್ಲಿ ಬಿಡ್ ಮಾಡುತ್ತಿಲ್ಲ. ಆದರೆ, ನಮ್ಮ ಪ್ರಧಾನಿ ನರೇಂದ್ರ ಮೋದಿಯವರನ್ನು ಮಾತ್ರ ದೂರುವ ಚಾಳಿ ಮುಂದುವರಿಸಿದ್ದಾರೆ. ಗ್ಯಾರಂಟಿ ಜಾರಿಯಾದ ನಂತರ ಸಂಬಂಧಪಟ್ಟ ಇಲಾಖೆಯ ನಷ್ಟ ಹೇಗೆ ತುಂಬಲಾಗುತ್ತದೆ ಎಂದು ಪ್ರಶ್ನಿಸಿದರು.
ಇನ್ನು ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್‌ಗಳಲ್ಲೂ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಆದರೆ, ಕಳೆದ ತಿಂಗಳ ಹಣವನ್ನು ನಿಗಮಗಳಿಗೆ ಇನ್ನೂ ಬಿಡುಗಡೆ ಮಾಡದೆ ಹಣ ಹೊಂದಿಸಲು ಹೆಣಗಾಡುತ್ತಿದ್ದಾರೆ. ಇದನ್ನೆಲ್ಲ ನೋಡಿದರೆ ಗೊತ್ತಾಗುತ್ತದೆ ಇವರು ಎಷ್ಟರ ಮಟ್ಟಿಗೆ ಹೇಳಿದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.