ಮಡಿಕೇರಿ: ವಿಶ್ವದಾದ್ಯಂತ ಹರಡಿರುವ ಕೊವಿಡ್–19 ಕೊರೋನಾ ವೈರಸ್ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ಮಾರ್ಚ್ 31 ರ ವರೆಗೆ ಜಿಲ್ಲೆಯ ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆಯನ್ನು ಒಳಗೊಂಡಂತೆ ದೈನಂದಿನ ಸಾಮೂಹಿಕ ನಮಾಜ್ ಪ್ರಾರ್ಥನೆ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ತಿಳಿಸಿದೆ.
ಸರ್ಕಾರ ಹೊರಡಿಸಿರುವ ನಿರ್ದೇಶನದಂತೆ ಜಿಲ್ಲೆಯ ಎಲ್ಲಾ ಮಸೀದಿಗಳ ಆಡಳಿತ ಸಮಿತಿಗಳು ಎಲ್ಲಾ ಮಸೀದಿಗಳಲ್ಲಿ ಕಡಿಮೆ ಧ್ವನಿಯಲ್ಲಿ ಆಝಾನ್ ನಿರ್ವಹಿಸುವುದು ಹಾಗೂ ಪೇಶ್ ಇಮಾಮ್ ಮತ್ತು ಮೌಝನ್ ಅವರನ್ನು ಹೊರತುಪಡಿಸಿ ಯಾವುದೇ ಸಾರ್ವಜನಿಕರನ್ನು ಮಸೀದಿಯಲ್ಲಿ ಸಾಮೂಹಿಕ ನಮಾಜ್ ನಿರ್ವಹಣೆಗೆ ಅವಕಾಶ ನೀಡಬಾರದು ಎಂದು ಜಿಲ್ಲಾ ವಕ್ಫ್ ಮಂಡಳಿ ತಿಳಿಸಿದೆ.
ಜೊತೆಗೆ ಮಾರ್ಚ್ 31 ರ ವರೆಗೆ ಯಾರೂ ಮನೆಯಿಂದ ಹೊರಗೆ ಬರಬಾರದೆಂದು ಹಾಗೂ ಸರ್ಕಾರದ ಮತ್ತು ಜಿಲ್ಲಾಡಳಿತದ ನಿಯಮವನ್ನು ಕಡ್ಡಾಯವಾಗಿ ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಕೋರಿದ್ದಾರೆ. ಯಾವುದೇ ಮದುವೆ ಸಮಾರಂಭಗಳು ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳನ್ನು ಮಾರ್ಚ್ 31 ರ ತನಕ ಕಡ್ಡಾಯವಾಗಿ ನಡೆಸುವಂತಿಲ್ಲ ಎಂದು ತಿಳಿಸಿದ್ದಾರೆ.
ಜೊತೆಗೆ ಹೊರ ದೇಶಗಳಿಂದ ಆಗಮಿಸಿದ ಎಲ್ಲಾ ಜನರನ್ನು ಕೂಡಲೇ ತಪಾಸಣೆಗೆ ಒಳಪಡಿಸಿ 14 ದಿನಗಳ ಕಾಲ ಮನೆಯಿಂದ ಹೊರ ಕಳುಹಿಸದಂತೆ ಮನೆಯಲ್ಲೇ ಇರಲು ಸೂಚನೆ ನೀಡಲಾಗಿದೆ. ಇದನ್ನು ಚಾಚು ತಪ್ಪದೆ ಪಾಲಿಸಬೇಕು ಎಂದು ಕೊಡಗಿನ ಎಲ್ಲಾ ಜಮಾಯತ್ತಿನ ಆಡಳಿತ ಮಂಡಳಿಯವರಿಗೆ ಜಿಲ್ಲಾ ವಕ್ಫ್ ಅಧಿಕಾರಿ ನಿರ್ದೇಶನ ನೀಡಿದ್ದಾರೆ.